ಶುಚಿತ್ವ ಮಾಡುವ ಕಾರ್ಮಿಕರು ದೇವರಿಗೆ ಸಮಾನ: ರೂಪಾ ಶೆಟ್ಟಿ
ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ

ಪುತ್ತೂರು, ಸೆ.23: ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಿತ್ಯ ಶುಚಿತ್ವದ ಕಾಯಕವನ್ನು ಮಾಡುತ್ತಿರುವ ಶ್ರಮಿಕರಾದ ಪೌರ ಕಾರ್ಮಿಕರು ಮಾಡುವ ಕೆಲಸ ಮಹತ್ವದ್ದಾಗಿದ್ದು, ಪರರ ಏಳಿಗೆಗಾಗಿ ದುಡಿಯುವ ಪೌರ ಕಾರ್ಮಿಕರು ದೇವರಿಗೆ ಸಮಾನ ಎಂದು ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ಪುರಭವನದಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪೌರ ಕಾರ್ಮಿಕರ ಉತ್ತಮ ಕೆಲಸದಿಂದಾಗಿ ನಗರಸಭೆಗೆ ಗೌರವ ಸಿಗುತ್ತಿದೆ. ಕಾರ್ಮಿಕರಿಗೆ ಉತ್ತಮ ಸೌಲ್ಯ ಒದಗಿಸುವುದರೊಂದಿಗೆ ಅವರ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವಾಗಬೇಕು. ಅವರ ಆರೋಗ್ಯ ತಪಾಸಣೆ 2 ತಿಂಗಳಿಗೊಮ್ಮೆ ನಡೆಸಬೇಕು. ಶುಚಿತ್ವದ ಕೆಲಸಗಳಿಗೆ ಇಲಾಖೆಯಿಂದ ಬೇಕಾದ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಯಂತೆ ಶೇ. 24.10 ಅನುದಾನವನ್ನು ಪೌರಕಾರ್ಮಿಕರ ಶ್ರಯೋಭಿವೃದ್ಧಿಗಾಗಿ ಬಳಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿ, ನಗರಸಭೆಯ ಅಭಿವೃದ್ಧಿಯಲ್ಲಿ ಪೌರಕಾರ್ಮಿಕರ ಪಾಲು ಮಹತ್ತರವಾಗಿದೆ. ಮಳೆ, ಗಾಳಿ, ಬಿಸಿಲುಗಳನ್ನು ಲೆಕ್ಕಿಸದೆ ನಿರಂತರ ಸ್ವಚ್ಛತೆ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ಮೂಲ ಸೌಕರ್ಯವನ್ನು ಒದಗಿಸುವ ಕೆಲಸವನ್ನು ನಗರ ಸಭೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪೌರ ಕಾರ್ಮಿಕ ಮೋನಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭಾ ಸದಸ್ಯರಾದ ಮುಖೇಶ್ ಕೆಮ್ಮಿಂಜೆ, ರಾಜೇಶ್ ಬನ್ನೂರು ಮತ್ತು ಮಹಮ್ಮದ್ ಅಲಿ ಅನಿಸಿಕೆ ವ್ಯಕ್ತಪಡಿಸಿದರು.
ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಹಿರಿಯ ಅಭಿಯಂತರ ತುಳಸಿದಾಸ್ ಸ್ವಾಗತಿಸಿದರು. ಶಹರಿ ರೋಜ್‌ಗಾರ್ ಯೋಜನೆಯ ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ವಂದಿಸಿದರು.







