ಅಂಕದ ಜೊತೆಗೆ ಸ್ವಂತಿಕೆ ಸಾಮಾನ್ಯ ಜ್ಞಾನವೂ ಮುಖ್ಯ: ವಿಠಲ ನಾಯಕ್
ಪುತ್ತೂರು, ಸೆ.23: ವಿದ್ಯಾರ್ಥಿಗಳು ಜೀವನದಲ್ಲಿ ಅಂಕ ಗಳಿಸುವುದರೊಂದಿಗೆ ಸ್ವಂತಿಕೆ ಮತ್ತು ಸಾಮಾನ್ಯ ಜ್ಞಾನವನ್ನು ಸಂಪಾದಿಸಲು ಪ್ರಯತ್ನಿಸಬೇಕು. ಜೊತೆಗೆ ದೇಶದ ಉತ್ತಮ ಶಕ್ತಿಯಾಗಿ ಮೂಡಿ ಬರಬೇಕು ಎಂದು ಬೋಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ಕಲಾವಿದ ವಿಠಲ ನಾಯಕ್ ಅವರು ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ಗೀತ ಸಾಹಿತ್ಯ ವೈವಿಧ್ಯ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಭಾರತವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಮೂಲ್ಯವಾದ ಈ ಯುವಶಕ್ತಿಯು ಮಾನವೀಯ ವೌಲ್ಯಗಳ ಕಡೆಗೆ ಹೆಚ್ಚಿನ ಗಮನ ಕೊಡದೆ, ವ್ಯರ್ಥವಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ರೀತಿಯ ಜೀವನ ವೌಲ್ಯಗಳನ್ನು ಬೆಳೆಸುವಲ್ಲಿ ಆಸಕ್ತಿ ವಹಿಸಿದಾಗ, ಮುಂದಿನ ಜೀವನವು ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರವು ಅರ್ಥಗರ್ಭಿತವಾದ ಕಥೆ, ಕವನ, ಕಾವ್ಯ ಮತ್ತು ಕಾದಂಬರಿಗಳನ್ನು ಒಳಗೊಂಡಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಇಂಥಹ ಅಮೂಲ್ಯವಾದ ಕೃತಿಗಳನ್ನು ಓದಿ, ರಸಾಸ್ವಾದಿಸುವಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದರು.
ಕನ್ನಡ ಸಂಘದ ನಿರ್ದೇಶಕಿ ಸುಮನಾ ಪ್ರಶಾಂತ್ ಇದ್ದರು. ಕನ್ನಡ ಉಪನ್ಯಾಸಕ ರಾಮ ನಾಯಕ್ ಮತ್ತು ಉಷಾ ಯಶವಂತ್ ಎ. ಸಹಕರಿಸಿದರು. ವಿದ್ಯಾರ್ಥಿಗಳಾದ ಆದಿಲ್ ಸ್ವಾಗತಿಸಿದರು. ಮುಹಮ್ಮದ್ ಸಿನಾನ್ ವಂದಿಸಿದರು. ದೀಪಾ ಭಟ್ ಕಾರ್ಯಕ್ರಮ ನಿರೂಪಿಸಿದರು.







