ಸಿಐಟಿಯು ರಾಜ್ಯಾಧ್ಯಕ್ಷರಾಗಿ ಎಸ್.ವರಲಕ್ಷ್ಮಿ, ಪ್ರ. ಕಾರ್ಯದರ್ಶಿಯಾಗಿ ಮೀನಾಕ್ಷಿ ಸುಂದರಂ

ಮಂಗಳೂರು, ಸೆ. 23: ದೇಶದ ಬಲಿಷ್ಠ ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯುನ 13ನೆ ಕರ್ನಾಟಕ ರಾಜ್ಯ ಸಮ್ಮೇಳನವು ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ 3 ದಿನಗಳ ಕಾಲ ಜರಗಿತು.
ದ.ಕ ಜಿಲ್ಲೆಯಿಂದ 60 ಮಂದಿ ಆಯ್ಕೆಗೊಂಡ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 350ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಮಿಕರ ಆಕರ್ಷಕ ರ್ಯಾಲಿ, ಬಹಿರಂಗ ಸಭೆ, ಉದ್ಘಾಟನಾ ಸಮಾರಂಭ, ಪ್ರತಿನಿಧಿ ಅಧಿವೇಶನ ಸೇರಿದಂತೆ ವಿವಿಧ ಹಂತದ ಕಾರ್ಯಕ್ರಮಗಳು ಜರಗಿದವು. ಸಮ್ಮೇಳನದ ಕೊನೆಯಲ್ಲಿ ಮುಂದಿನ 3 ವರ್ಷಗಳ ಅವಧಿಗೆ ನೂತನ ಕರ್ನಾಟಕ ರಾಜ್ಯ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.
ಸಿಐಟಿಯುನ ನೂತನ ರಾಜ್ಯಾಧ್ಯಕ್ಷರಾಗಿ ಎಸ್. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಯಾಗಿ ಮೀನಾಕಿ ಸುಂದರಂ, ಖಜಾಂಚಿಯಾಗಿ ಪರಮೇಶ್ವರ್ ಸರ್ವಾನುಮತದಿಂದ ಆಯ್ಕೆಗೊಂಡರು. 35 ಮಂದಿಯ ಪದಾಧಿಕಾರಿಗಳಲ್ಲಿ ದ.ಕ. ಜಿಲ್ಲೆಯಿಂದ ಜೆ. ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಸುನಿಲ್ ಕುಮಾರ್ ಬಜಾಲ್, ಪದ್ಮಾವತಿ ಶೆಟ್ಟಿಯವರನ್ನು ರಾಜ್ಯ ಕಾರ್ಯದರ್ಶಿಗಳಾಗಿ ಆರಿಸಲಾಯಿತು.
ರಾಜ್ಯ ಸಮಿತಿ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ, ಶಿವಕುಮಾರ್, ವಸಂತನಡ, ರೋಹಿಣಿ, ರಾಧಾ ಮೂಡುಬಿದಿರೆ, ಗಿರಿಜಾ, ಬಾಬು ಪಿಲಾರ್, ವಸಂತಿ, ರಾಮಣ್ಣ ವಿಟ್ಲ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 120 ಮಂದಿಯನ್ನು ಆಯ್ಕೆಗೊಳಿಸಲಾಯಿತು.







