ಪಾಲಿಸಲು ಸಾಧ್ಯವಿಲ್ಲದ ಆದೇಶ; ನ್ಯಾಯಾಂಗ ನಿಂದನೆಯಾಗದು: ಕುಮಾರಸ್ವಾಮಿ

ಬೆಂಗಳೂರು, ಸೆ. 23: ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವ ನೀರಿಗೂ ಸಂಕಷ್ಟ ಸೃಷ್ಟಿಯಾಗಿದ್ದು, ತಮಿಳುನಾಡಿಗೆ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪಾಲಿಸಲು ಸಾಧ್ಯವಿಲ್ಲ. ಹೀಗಾಗಿ ಅದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಬದುಕಿ-ಬದುಕಲು ಬಿಡಿ’ ಎಂಬ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ರಾಜ್ಯಕ್ಕೆ ಅನ್ವಯ ಆಗುವುದಿಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುವ ಅನ್ಯಾಯವನ್ನು ಇನ್ನೂ ಎಷ್ಟು ಕಾಲ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಕಾವೇರಿ ಸಂಕಷ್ಟ ಸೂತ್ರದನ್ವಯ ಈಗಾಗಲೇ ನಿಗದಿತ ಪ್ರಮಾಣದಷ್ಟು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಇನ್ನೂ ನೀರು ಹರಿಸಲು ಆದೇಶ ಹೊರಡಿಸಿರುವುದು ಅವಾಸ್ತವಿಕ ಎಂದ ಅವರು, ಕೋರ್ಟ್‌ಗಳು, ಒಕ್ಕೂಟ ವ್ಯವಸ್ಥೆಗೆ ಗೌರವ ನೀಡುವುದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ. ಆದರೂ, ರಾಜ್ಯದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.
ಕಾವೇರಿ ನದಿ ನೀರು ಹಂಚಿಕೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ರಾಜ್ಯದ ಜನತೆ ಗೌರಿ-ಗಣೇಶನ ಹಬ್ಬವನ್ನು ನೆಮ್ಮದಿಯಿಂದ ಆಚರಿಸಲು ಆಗಲಿಲ್ಲ. ಹೃದಯ ವೈಶಲ್ಯತೆಯಿಂದ, ಸ್ವಪ್ರೇರಣೆಯಿಂದಲೆ ನೀರು ಹರಿಸಲು ರಾಜ್ಯ ಕೋರ್ಟಿಗೆ ತಿಳಿಸಿತ್ತು. ಆದರೆ, ನ್ಯಾಯಾಲಯ ಹೆಚ್ಚಿನ ನೀರು ಹರಿಸಲು ಆದೇಶ ನೀಡಿದ್ದು, ಅದನ್ನು ಪಾಲಿಸಲು ಸಾಧ್ಯವಿಲ್ಲ ಎಂದರು.
ನ್ಯಾಯಾಲಯ ಪಾಲಿಸಲು ಆಗದ ಆದೇಶ ನೀಡಿದ್ದು, ಯಾವುದೇ ಕಾರಣಕ್ಕೂ ನ್ಯಾಯಾಂಗ ನಿಂದನೆ ಆಗುವುದಿಲ್ಲ. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನದಿಂದ ಹಿಂದೆ ಸರಿಯದೆ ಧೈರ್ಯವಾಗಿ ಮುಂದೆ ಹೆಜ್ಜೆ ಇರಿಸಿ ಎಂದು ಅವರು ಸಲಹೆ ಮಾಡಿದರು.
ಒಡೆದ ಮನೆ: ಕಾವೇರಿ ನ್ಯಾಯಮಂಡಳಿ ಒಂದು ರೀತಿಯಲ್ಲಿ ಒಡೆದ ಮನೆಯಾಗಿದೆ. ಆ ಹಿನ್ನೆಲ್ಲೆಯಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸ್ಪಷ್ಟಣೆ ನೀಡಬೇಕೆಂದು ಆಗ್ರಹಿಸಿದರು.







