ಪಾಕ್: ರಸ್ತೆಯಲ್ಲಿ ವಿಮಾನಗಳನ್ನು ಇಳಿಸುವ ಅಭ್ಯಾಸ ಮಾಡಿದ ವಾಯು ಪಡೆ
ಭಾರತದೊಂದಿಗಿನ ಉದ್ವಿಗ್ನತೆಯೊಂದಿಗೆ ಸಂಬಂಧವಿಲ್ಲವೇ?

ಇಸ್ಲಾಮಾಬಾದ್, ಸೆ. 23: ತನ್ನ ವಿಮಾನಗಳನ್ನು ರಸ್ತೆಯ ಮೇಲೆ ಇಳಿಸಲು ಅಭ್ಯಾಸ ನಡೆಸುವುದಕ್ಕಾಗಿ ಪಾಕಿಸ್ತಾನದ ವಾಯು ಪಡೆ ಗುರುವಾರ ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದನ್ನು ಮುಚ್ಚಿದೆ.
ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿನ ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರು ಇತ್ತೀಚೆಗೆ ನಡೆಸಿದ ದಾಳಿಯ ಬಳಿಕ ಭಾರತದೊಂದಿಗೆ ಉಂಟಾಗಿರುವ ಉದ್ವಿಗ್ನತೆಗೂ ಇದಕ್ಕೂ ಸಂಬಂಧವಿಲ್ಲ; ಇದು ನಿಯಮಿತ ತರಬೇತಿಯಷ್ಟೆ ಎಂದು ಪಾಕಿಸ್ತಾನ ಹೇಳಿದೆ.
ಗುರುವಾರ ಇಸ್ಲಮಾಬಾದ್ ಮತ್ತು ಲಾಹೋರ್ ನಗರಗಳನ್ನು ಸಂಪರ್ಕಿಸುವ ನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರವನ್ನು ಹಳೆಯ ಪರ್ವತ ರಸ್ತೆಯತ್ತ ತಿರುಗಿಸಲಾಗಿತ್ತು. ಇಲ್ಲಿ ಎರಡು ದಿನಗಳ ವಾಯು ಪಡೆ ಅಭ್ಯಾಸ ನಡೆಯಲಿದೆ.
‘‘ವಿಮಾನಗಳು ಇಲ್ಲಿ ರಸ್ತೆಯ ಮೇಲೆ ಇಳಿದವು. ಇದನ್ನು ಅವರು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ’’ ಎಂದು ಪಾಕಿಸ್ತಾನಿ ವಾಯು ಪಡೆಯ ವಕ್ತಾರ ಕಮಾಡೋರ್ ಜಾವೇದ್ ಮುಹಮ್ಮದ್ ಅಲಿ ಹೇಳಿದರು.
‘‘ರನ್‌ವೇಗಳು ಹಾಳಾದಲ್ಲಿ ಅಥವಾ ಅವುಗಳು ಬಳಕೆಗೆ ಸಿಗದಿದ್ದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಇಂಥ ಅಭ್ಯಾಸಗಳ ಅಗತ್ಯವಿದೆ’’ ಎಂದರು.
‘‘ಇತ್ತೀಚಿನ ದಿನಗಳಲ್ಲಿ ಭಾರತದೊಂದಿಗಿನ ಸಂಬಂಧದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಅಭ್ಯಾಸವನ್ನು ನಡೆಸಲಾಗುತ್ತಿಲ್ಲ. ಇದೇ ಸಮಯದಲ್ಲಿ ಅಭ್ಯಾಸ ನಡೆಯುತ್ತಿರುವುದು ಕಾಕತಾಳೀಯವಷ್ಟೆ’’ ಎಂದು ವಕ್ತಾರರು ನುಡಿದರು.





