ಮತ್ತೆ ಕರ್ತವ್ಯಕ್ಕೆ ಹಾಜರಾದ ಕಬ್ಬಾಳ್‌ರಾಜ್

ಉಡುಪಿ, ಸೆ.23: ಗುರುವಾರ ತನ್ನ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿ ಯಾರ ಕೈಗೂ ಸಿಗದೇ ನಾಪತ್ತೆಯಾಗಿದ್ದ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಬ್ಬಳ್‌ರಾಜ್, ಹಿರಿಯ ಅಧಿಕಾರಿಗಳು ‘ತಿಳುವಳಿಕೆ’ ನೀಡಿದ ಹಿನ್ನೆಲೆಯಲ್ಲಿ ಇಂದು ಕರ್ತವ್ಯಕ್ಕೆ ಮರಳಿ ಬಂದಿದ್ದಾರೆ. ಕಬ್ಬಳ್‌ರಾಜ್ ಇಂದು ಬೆಳಗ್ಗೆ ಕೋಟ ಠಾಣೆಯಲ್ಲಿ ಮತ್ತೆ ಕರ್ತವ್ಯಕ್ಕೆ ಮರಳಿರುವುದನ್ನು ಖಚಿತ ಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಅವರು ಸೇವೆಗೆ ಮರಳಿ ಬಂದಿದ್ದಾರೆ ಎಂದರೆ ತನ್ನ ರಾಜೀನಾಮೆ ಪತ್ರವನ್ನು ಮರಳಿ ಪಡೆದಿದ್ದಾರೆ ಎಂದೇ ಅರ್ಥ ಎಂದರು.
ಕಬ್ಬಳ್‌ರಾಜ್ ತನ್ನ ರಾಜೀನಾಮೆಗೆ ‘ವೈಯಕ್ತಿಕ ಕಾರಣ’ಗಳನ್ನು ಉಲ್ಲೇಖಿಸಿದ್ದರು. ಅವರೊಂದಿಗೆ ಮಾತನಾಡಿ ತಿಳುವಳಿಕೆ ಹೇಳಿದ್ದೇನೆ. ಸದ್ಯಕ್ಕೆ ಕೋಟದಲ್ಲೇ ಕರ್ತವ್ಯ ನಿರ್ವಹಿಸುತಿದ್ದಾರೆ ಎಂದು ಬಾಲಕೃಷ್ಣ ಅವರು ತನ್ನ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಕಬ್ಬಳ್‌ರಾಜ್ ನಿನ್ನೆ ಠಾಣೆಯಲ್ಲಿ ಪತ್ರವನ್ನು ಬರೆದಿಟ್ಟು ರಿವಾಲ್ವರ್, ಇಲಾಖೆಯ ಮೊಬೈಲ್‌ನ್ನು ಬಿಟ್ಟು ತನ್ನ ಖಾಸಗಿ ವಾಹನದಲ್ಲಿ ತೆರಳಿದ್ದರು. ಈ ಪತ್ರವನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರ ಮೂಲಕ ತರಿಸಿಕೊಂಡಿದ್ದೇನೆ. ಅದರಲ್ಲಿ ಅವರು ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ ಎಂದರು. ರಾಜೀನಾಮೆ ಪತ್ರ ಬರೆದಿಟ್ಟ ಅವರು ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಬಂಟ್ವಾಳಕ್ಕೆ ತೆರಳಿದ್ದರು. ರಾತ್ರಿಯ ವೇಳೆ ಅವರು ಸಂಪರ್ಕಕ್ಕೆ ಸಿಕ್ಕಿದ್ದರು ಎಂದು ಎಸ್ಪಿ ಬಾಲಕೃಷ್ಣ ವಿವರಿಸಿದರು.
ಪತ್ರದಲ್ಲಾಗಲೀ, ಬೇರೆ ಸಂದರ್ಭದಲ್ಲಾಗಲಿ ಅವರು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಅವರು ವರ್ಗಾವಣೆ ಬಯಸಿದ್ದಾರೆ ಎಂದು ಗೊತ್ತಾಗಿದೆ. ನಮ್ಮಲ್ಲಿ ಪ್ರತಿಯೊಂದು ವರ್ಗಾವಣೆಗೂ ಅದರದೇ ಆದ ಮಾರ್ಗದರ್ಶಿ ಸೂತ್ರಗಳಿವೆ. ಅದಕ್ಕನುಗುಣವಾಗಿ ಅವರು ವರ್ಗಾವಣೆಗೆ ಪ್ರಯತ್ನಿಸಬಹುದು ಎಂದರು. ಈಗಾಗಲೇ ಅವರಿಗೆ ಕೌನ್ಸಿಲಿಂಗ್ ಮಾಡಲಾಗಿದೆ. ತಿಳುವಳಿಕೆ ಹೇಳಿದ್ದೇವೆ.
ನಾವು ಪೊಲೀಸ್ ಕುಟುಂಬದ ಸದಸ್ಯರಾಗಿ ಎಲ್ಲರನ್ನೂ ಸರಿದೂಗಿಸಿಕೊಂಡು ಜೊತೆಯಲ್ಲೇ ಕರೆದೊಯ್ಯಬೇಕಾಗುತ್ತದೆ ಎಂದು ಕೆ.ಟಿ.ಬಾಲಕೃಷ್ಣ ನುಡಿದರು.







