ವಿದೇಶಿ ಸಂಸ್ಕೃತಿಯಿಂದ ಹೊಸ ಸಂಶೋಧನೆ ಅಸಾಧ್ಯ: ಪ್ರೊ. ತ್ಯಾಗರಾಜ್
ವಿಚಾರಗೋಷ್ಠಿ
.jpg)
ಸಾಗರ, ಸೆ.23: ನಮ್ಮತನವನ್ನು ಕಳೆದುಕೊಳ್ಳುತ್ತಾ, ಹೊರಗಿನ ಸಂಸ್ಕೃತಿಯನ್ನು ಎರವಲು ಪಡೆದುಕೊಂಡು ಹೊಸ ಸಂಶೋಧನೆಯತ್ತ ಗಮನ ಹರಿಸುತ್ತೇವೆ ಎಂಬುದು ತಪ್ಪುಕಲ್ಪನೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ. ಸಿ.ಎಂ. ತ್ಯಾಗರಾಜ್ ಹೇಳಿದರು. ಇಲ್ಲಿನ ಎಲ್‌ಎಲ್‌ಬಿ ಕಾಲೇಜಿನಲ್ಲಿ ಶುಕ್ರವಾರ ಕೆ.ಎಚ್.ಶ್ರೀನಿವಾಸ್ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಯುಜಿಸಿ ಪ್ರಾಯೋಜಿತ ಸಂಶೋಧನಾ ಕಾರ್ಯವಿಧಾನಗಳು ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಮಗೆ ಚಾಯ್ ಪೇ ಚರ್ಚೆಗಿಂತ ಮನ್ ಕೀ ಬಾತ್‌ನಂತಹ ಸಂಶೋಧನಾ ವಿಧಾನ ಅಗತ್ಯವಾಗಿದೆ. ದೊಡ್ಡದೊಡ್ಡ ಪುಸ್ತಕಗಳನ್ನು ಓದುವುದರಿಂದ ಸಂಶೋಧನಾ ಪ್ರವೃತ್ತಿ ಬೆಳೆಯುವುದಿಲ್ಲ. ಬದಲಾಗಿ ಆಳವಾದ ಅಧ್ಯಯನ ಜೊತೆಗೆ ವಿಷಯಗಳನ್ನು ಅದರ ನೆಲೆಯಲ್ಲಿಯೆ ಗ್ರಹಿಸುವ ಶಕ್ತಿಯನ್ನು ಸಂಶೋಧನಾ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಾವು ಸಂಶೋಧನೆಗೆ ಕೈಗೆತ್ತಿಕೊಳ್ಳುವ ವಿಷಯಗಳು ಸಮಾಜಕ್ಕೆ ಎಷ್ಟು ಪೂರಕವಾಗಿದೆ ಎನ್ನುವತ್ತ ಸಹ ಗಮನ ಹರಿಸಬೇಕು ಎಂದರು. 1,700 ವರ್ಷಗಳ ಹಿಂದೆ ಪ್ರಭುತ್ವ ಇರಲಿಲ್ಲ. ಹಣ, ಸಂಪತ್ತು, ಕೀರ್ತಿ, ಜಾತಿ ವ್ಯವಸ್ಥೆ ಇರಲಿಲ್ಲ. ಅಭಿವೃದ್ಧಿ ತನ್ನ ಹಂತದಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಬದಲಾದ ದಿನಮಾನಗಳಲ್ಲಿ ಹಣ, ಜಾತಿ ವ್ಯವಸ್ಥೆ, ಕುರ್ಚಿ ಕಸರತ್ತು, ಹೆಸರುಗಳಿಕೆಯಂತಹವುಗಳು ವಿಜೃಂಭಿಸುತ್ತಿದೆ. ಈ ನೆಲೆಯಲ್ಲಿ ನಿಂತು ಯೋಚಿಸುವವರು ಹೆಚ್ಚಾಗುತ್ತಿರುವುದರಿಂದ ವಿಶೇಷವಾದದ್ದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸಂಶೋಧನಾ ವಿಧಾನಗಳು ಸಹ ಹಳಿ ತಪ್ಪುತ್ತಿದೆ. ಆಯ್ಕೆಯ ವಿಷಯದಲ್ಲಿ ಅನೇಕರು ಎಡವುತ್ತಿದ್ದಾರೆ. ಭಾರತವನ್ನು ಭಾರತವನ್ನಾಗಿ ನೋಡದೆ, ಅಮೆರಿಕ, ಕೊರಿಯ, ಜಪಾನ್ ಎನ್ನುವ ಪರಿಕಲ್ಪನೆಯಲ್ಲಿ ಸಂಶೋಧನಾ ಪ್ರವೃತ್ತಿಯತ್ತ ಗಮನ ಹರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ವ್ಯಾಖ್ಯಾನಿಸಿದರು. ನಮಗೆ ಗಿಳಿಪಾಠ ಬೇಡ. ನಮ್ಮತನ ಉಳಿಸಿಕೊಳ್ಳುವ, ಮುಂದಿನವರೆಗೂ ಕಾಯ್ದುಕೊಳ್ಳುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ನಾವು ರೊಟ್ಟಿ ಕೊಟ್ಟು ಬ್ರೆಡ್ ತಂದಿದ್ದೇವೆ, ಅಹಿಂಸೆ ಕೊಟ್ಟು ಗನ್ ತಂದಿದ್ದೇವೆ. ನಮ್ಮ ನೆಲೆಯನ್ನು ಗಟ್ಟಿಗೊಳಿಸಬೇಕಾಗಿದ್ದ ಎಲ್ಲವನ್ನೂ ನಾವು ಕೊಟ್ಟಿದ್ದೇವೆ. ಪರಾವಲಂಬಿ ಬದುಕಿಗೆ ಒಗ್ಗಿಕೊಳ್ಳುವ ಪ್ರವೃತ್ತಿಯಿಂದ ನಾವು ಹೊರಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಶೋಧನಾ ಕಾರ್ಯವಿಧಾನಗಳು ವಿಸ್ತರಿಸಿಕೊಳ್ಳಬೇಕು ಎಂದರು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಅನಿಲ್ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿ.ಎಸ್.ಲಿಂಗರಾಜ್, ಖಜಾಂಚಿ ವಿದ್ಯಾಧರ ಮತ್ತಿತರರು ಉಪಸ್ಥಿತರಿದ್ದರು.







