ಮನುಕುಲದ ಒಳಿತಿಗೆ ಅನ್ವೇಷಣೆಗಳು ನಡೆಯಬೇಕಿವೆ: ಎ.ಎನ್.ಮಹೇಶ್
ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಚಿಕ್ಕಮಗಳೂರು ಸೆ.23: ಮನುಕುಲದ ಒಳಿತಿಗಾಗಿ ಅನ್ವೇಷಣೆಗಳು ನಡೆಯಬೇಕಿದೆ. ಭಾರತ ಹಳ್ಳಿಗಳ ದೇಶವಾಗಿದ್ದು ಕೃಷಿ ಕುರಿತು ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ, ಜಿಲ್ಲಾ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ-2016ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಕೃಷಿಕ ಕುಟುಂಬಕ್ಕೆ ಮಾನವ ಸಂಪನ್ಮೂಲದ ಕೊರತೆಯಿದ್ದು ಆಸ್ಟ್ರೇಲಿಯಾದಂತಹ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಚಟುವಟಿಕೆ ನಡೆಯುತ್ತಿದ್ದು ಆ ನಿಟ್ಟಿನಲ್ಲಿ ಸಂಶೋಧನೆಯ ಅಗತ್ಯವಿದೆಯೆಂದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷವೆಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಮಂಜುನಾಥ್ ಮಾತನಾಡಿ, ಮಾನವನ ಜೀವನವನ್ನು ಸರಳೀಕರಣಗೊಳಿಸಲು ವೈಜ್ಞಾನಿಕ ಅನ್ವೇಷಣೆಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪರಿಣಾಮಕಾರಿ ಅಧ್ಯಯನ ಅಗತ್ಯವೆಂದರು. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪಪ್ರಾದೇಶಿಕ ವಿಜ್ಞ್ಞಾನ ಕೇಂದ್ರವನ್ನು ಚಿಕ್ಕಮಗಳೂರಿನಲ್ಲಿ ಪ್ರಾರಂಭ ಮಾಡುವ ಪ್ರಕ್ರಿಯೆ ಆರಂಭವಾಗಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಜಿ.ಕೆ ಅರಸ್ ಮಾತನಾಡಿ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ.ನೀಲಕಂಠಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಕೆ.ವಿ.ಕಲ್ಲೇಶ್, ಪದಾಧಿಕಾರಿಗಳಾದ ಓಂಕಾರಪ್ಪ, ಸತ್ಯನಾರಾಯಣ, ತ್ಯಾಗರಾಜ್, ಮೊರಾರ್ಜಿ ದೇಸಾಯಿ ವಸತಿ ಪಪೂ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.







