ಪೌರಕಾರ್ಮಿಕರ ಕಡೆಗಣನೆ ವಿಷಾದನೀಯ: ನಾಗಪ್ಪ
ಪೌರ ಕಾರ್ಮಿಕರ ದಿನಾಚರಣೆ
.jpg)
ಸಾಗರ, ಸೆ.23: ಆಳುವ ಸರಕಾರಗಳು ಪೌರಕಾರ್ಮಿಕರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಮುತುವರ್ಜಿ ವಹಿಸಿದರೂ, ಉನ್ನತ ಅಧಿಕಾರಿಗಳು ಮಾತ್ರ ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸದೆ ಇರುವುದು ವಿಷಾದದ ಸಂಗತಿ ಎಂದು ಪೌರ ಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ನಾಗಪ್ಪ ಹೇಳಿದರು. ಇಲ್ಲಿನ ನಗರಸಭೆ ಆವರಣದಲ್ಲಿ ಶುಕ್ರವಾರ ಪೌರ ಕಾರ್ಮಿಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪೌರಕಾರ್ಮಿಕರು ಮಾಡುವ ಕ್ಲಿಷ್ಟಕರ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯವಿಲ್ಲ. ಆದರೆ, ಅವರಿಗೆ ಸಂಬಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಾಗ ಮಾತ್ರ ಮೂಗು ಮುರಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ರಾಜ್ಯ ಸರಕಾರ ಗುತ್ತಿಗೆ ಪೌರ ಕಾರ್ಮಿಕರಿಗೆ 3,500 ರೂ. ಹೆಚ್ಚುವರಿ ವೇತನ ನೀಡುವ ಉದ್ದೇಶ ಹೊಂದಿದೆ. ಇದರಿಂದ ಗುತ್ತಿಗೆ ಪೌರಕಾರ್ಮಿಕರು ಕನಿಷ್ಠ ವೇತನ 16ರಿಂದ 17ಸಾವಿರ ರೂ. ಪಡೆಯಲು ಸಾಧ್ಯವಾಗುತ್ತದೆ. ಇದನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಉಷಾ ಎನ್., ಊರಿನ ಸೌಂದರ್ಯಕ್ಕೆ ಕಾರಣ ಶ್ರಮಿಕವರ್ಗವಾಗಿರುವ ಪೌರಕಾರ್ಮಿಕರು. ಅವರ ಬೇಕುಬೇಡಗಳಿಗೆ ನಗರಸಭೆ ಪೂರಕವಾಗಿ ಸ್ಪಂದಿಸುತ್ತದೆ. ಪೌರಕಾರ್ಮಿಕರು ಸರಕಾರದ ಸೌಲಭ್ಯಗಳನ್ನು ಪಡೆದು ತಮ್ಮ ಜೀವನವನ್ನು ಆರೋಗ್ಯಪೂರ್ಣವಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು. ನಗರಸಭೆ ಉಪಾಧ್ಯಕ್ಷೆ ಮರಿಯಾ ಲೀಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಅಲಿ ಖಾನ್, ಸದಸ್ಯೆ ನಾದಿರಾ, ಕಚೇರಿ ವ್ಯವಸ್ಥಾಪಕ ಶಿವಮೂರ್ತಿ, ಹಿರಿಯ ಪೌರ ಕಾರ್ಮಿಕ ಕೃಷ್ಣ, ಆರೋಗ್ಯ ನಿರೀಕ್ಷಕ ಶೈಲೇಶ್, ಇಬ್ರಾಹೀಂ ಉಪಸ್ಥಿತರಿದ್ದರು.





