ಸಾಧನೆ ಸಹಿಸಿಕೊಳ್ಳದೆ ರಾಜಕೀಯ ಪ್ರೇರಿತ ಆರೋಪ: ರಾಮಚಂದ್ರಪ್ಪ
ಪತ್ರಿಕಾಗೋಷ್ಠಿ

ತರೀಕೆರೆ, ಸೆ.23: ಬಿಜೆಪಿ ಸಭೆಯಲ್ಲಿ ಮಾಜಿ ಶಾಸಕರಾದ ಡಿ. ಎಸ್. ಸುರೇಶ್ ಹಾಲಿ ಶಾಸಕರಾದ ಜಿ.ಎಚ್.ಶ್ರೀನಿವಾಸ್‌ರವರ ಮೇಲೆ ಮಾಡಿರುವ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಂಕಷ್ಟಕ್ಕೆ ಈಡಾಗಿರುವ ಈರುಳ್ಳಿ ಬೆಲೆಗಾರರಿಗೆ ಬೆಂಬಲ ಬೆಲೆ ನೀಡುವಂತೆ ಸರಕಾರಕ್ಕೆ ಶಾಸಕರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ತಾಲೂಕು ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕೊಡುವಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಈಗಾಗಲೇ 16ಸಾವಿರ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ. ಮಾಜಿ ಶಾಸಕರು ಈ ಸಾಧನೆಯನ್ನು ಸಹಿಸಿಕೊಳ್ಳದೇ ಶಾಸಕರು ಹಾಗೂ ಅವರ ಬೆಂಬಲಿಗರು ಫಲಾನುಭವಿಗಳಿಂದ ಹಣ ಪಡೆದಿದ್ದಾರೆ ಎಂದು ವೃಥಾ ಆರೋಪ ಮಾಡಿರುವುದು ಖಂಡನೀಯ ಎಂದರು.
ಬಗರ್ ಹುಕುಂ ಸಮಿತಿ ಸದಸ್ಯ ಟಿ.ಎನ್.ಜಗದೀಶ ಮಾತನಾಡಿ, ತಾಲೂಕಿನಲ್ಲಿ 5,120 ಬಗರ್ ಹುಕುಂ ಅರ್ಜಿಗಳಿದ್ದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೀಡಿರುವ ನಿರ್ದೇಶನದ ಮೇರೆಗೆ ಡಿ.31ರ ಒಳಗೆ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಶನಿವಾರ ಸಮಿತಿಯ ಸಭೆ ನಡೆಸಿ ಅರ್ಜಿ ಇತ್ಯರ್ಥಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಿರ್ಜಾ ಇಸ್ಮಾಯೀಲ್, ಮಾಜಿ ಪುರಸಭೆ ಅಧ್ಯಕ್ಷ ಟಿ.ಇ.ಈರಣ್ಣ, ಸದಸ್ಯ ಗಂಗಾಧರ, ಮುಖಂಡರಾದ ಸರ್ಫಾಝ್, ಲಿಂಗದಹಳ್ಳಿ ರಾಜು, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.







