ನರೇಶ್ ಶೆಣೈಯ ಮಂಪರು ಪರೀಕ್ಷೆಗೆ ಅನುಮತಿ ನಿರಾಕರಣೆ
ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮಂಗಳೂರು, ಸೆ. 23: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಆರೋಪಿ, ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈಯ ಮಂಪರು ಪರೀಕ್ಷೆಗೆ ಅನುಮತಿ ನೀಡಲು ಕೋರಿ ವಿನಾಯಕ ಬಾಳಿಗರ ತಂದೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮೃತರ ತಂದೆ ರಾಮಚಂದ್ರ ಬಾಳಿಗ ಒಂದನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಮಂಪರು ಪರೀಕ್ಷೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ತನಿಖಾಧಿಕಾರಿಗಳು ಕೂಡ ನರೇಶ್ ಶೆಣೈ ಮಂಪರು ಪರೀಕ್ಷೆಗೆ ಅವಕಾಶ ಕೋರಿ ನಗರದ 2ನೆ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು, ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ನ್ಯಾಯಾಲಯದ ತೀರ್ಮಾನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಮಚಂದ್ರ ಬಾಳಿಗಾ ಅವರ ಪರ ವಕೀಲರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇತ್ತೀಚೆಗೆ ನರೇಶ್ ಶೆಣೈಗೆ ಹೈಕೋರ್ಟ್ ಜಾಮೀನು ನೀಡಿರುವುದರ ವಿರುದ್ದವೂ ರಾಮಚಂದ್ರ ಬಾಳಿಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.





