ಅಕಾಲಿ ದಳದ ನಾಯಕರಿಂದ ಗರ್ಭಿಣಿ ಶುಶ್ರೂಷಕಿಯ ಮೇಲೆ ಹಲ್ಲೆ
ಮೊಗಾ, ಸೆ.23: ಪಂಜಾಬ್‌ನ ಆಳುವ ಅಕಾಲಿ ದಳದ ಒಬ್ಬ ರಾಜಕಾರಣಿ ಮತ್ತಾತನ ಪುತ್ರ, ತಮ್ಮನ್ನು ಸರತಿಯಲ್ಲಿ ಕಾಯುವಂತೆ ತಿಳಿಸಿದ ನರ್ಸ್ ಒಬ್ಬಳ ಮೇಲೆ ದಾಳಿ ನಡೆಸಿ ಆಕೆಗೆ ಥಳಿಸಿರುವ ಚಿತ್ರಗಳು ಕ್ಯಾಮರಾದಲ್ಲಿ ದಾಖಲಾಗಿವೆ. ಮೊಗಾದ ಆಸ್ಪತ್ರೆಯೊಂದರ ಗರ್ಭಿಣಿ ನರ್ಸ್‌ಗೆ ನೆಲದಲ್ಲಿ ಕುಸಿದು ಬೀಳುವಂತೆ ಅವರು ಥಳಿಸಿದ್ದಾರೆ.
ರಾಜಕಾರಣಿ ಮತ್ತಾತನ ಮಗ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಪೊಲೀಸರು ಅನಧಿಕೃತ ಪ್ರವೇಶ, ನೋವುಂಟು ಮಾಡಿರುವುದು ಹಾಗೂ ಕ್ರಿಮಿನಲ್ ಹಸ್ತಕ್ಷೇಪ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪರಂಜಿತ್ ಸಿಂಗ್ ಹಾಗೂ ಆತನ ಮಗ ಗುರುಜಿತ್ ಎಂಬವರು ಒಬ್ಬ ರೋಗಿಯನ್ನು ಕರೆ ತರಲು ಗುಪ್ತಾ ಆಸ್ಪತ್ರೆಗೆ ಹೋಗಿದ್ದರು. ಆದರೆ, ಅವರಿಗೆ ಸ್ವಲ್ಪ ಕಾಯುವಂತೆ ಸೂಚಿಸಿದ ಶುಶ್ರೂಷಕಿಯ ಜೊತೆ ಅವರು ಜಗಳವಾಡಿದರು.
ಪರಂಜಿತ್‌ನ ಪತ್ನಿ ದಲ್ಜಿತ್ ಕೌರ್ ಎಂಬಾಕೆ ಸರಪಂಚಳಾಗಿದ್ದಾಳೆ.
ತಂದೆ ಹಾಗೂ ಪುತ್ರ ಆಸ್ಪತ್ರೆಯ ಸಿಬ್ಬಂದಿಗೆ ಅಬ್ಬರಿಸುತ್ತಿರುವುದು ಹಾಗೂ ಸಮಾಧಾನಿಸಲು ಯತ್ನಿಸಿದ ಶುಶ್ರೂಷಕಿಯನ್ನು ಥಳಿಸುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ ಪರಂಜಿತ್ ಹಾಗೂ ಗುರುಜಿತ್ ನರ್ಸನ್ನು ತಳ್ಳುತ್ತಿರುವುದು ಹಾಗೂ ಥಳಿಸುತ್ತಿರುವುದು ಕಾಣಿಸುತ್ತಿದೆ.
ತಂದೆ-ಪುತ್ರ ಸಿಬ್ಬಂದಿಗಾಗಿರುವ ಆಸನಗಳಲ್ಲಿ ಕುಳಿತುಕೊಂಡಿದ್ದ ಕಾರಣ ತಾನು ಕೇವಲ ಅವರಿಗೆ ಹೊರಗೆ ಕಾಯುವಂತೆ ತಿಳಿಸಿದೆ. ಅದನ್ನು ಸಹಿಸದ ಅವರು ತನ್ನನ್ನು ಬಯ್ಯಲಾರಂಭಿಸಿದರು. ಅದನ್ನು ತಾನು ಆಕ್ಷೇಪಿಸಿದೆ. ಆದರೆ, ಅವರು ತನಗೆ ಥಳಿಸಿ ನೆಲಕ್ಕೆ ದೂಡಿದರು. ತನ್ನ ಸ್ಥಿತಿಯನ್ನು ತಿಳಿಸಿ, ಥಳಿಸದಿರುವಂತೆ ತಾನು ವಿನಂತಿಸಿದರೂ ಅವರು ತನಗೆ ಹೊಡೆದರೆಂದು 8 ತಿಂಗಳ ಬಸುರಿಯಾಗಿರುವ ನರ್ಸ್ ರಮಣದೀಪ್ ವಿವರಿಸಿದ್ದಾಳೆ.
ತಾವು ಸರಪಂಚರೆಂದು ತಂದೆ-ಪುತ್ರ ಹೇಳಿದರು. ಅವರು ಆಡಳಿತ ಪಕ್ಷದವರಾದ ಕಾರಣ ತಮ್ಮ ಪ್ರಭಾವವನ್ನುಪಯೋಗಿಸಿ ಸಿಬ್ಬಂದಿಯನ್ನು ತಡೆದರೆಂದು ಗುಪ್ತಾ ಆಸ್ಪತ್ರೆಯ ರಾಹುಲ್ ಗುಪ್ತಾ ತಿಳಿಸಿದ್ದಾರೆ.





