ಹರ್ಯಾಣ ಮಾಜಿ ಡಿಜಿಪಿ ಅಪರಾಧ ಎತ್ತಿಹಿಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಸೆ.23: ಬಾಲಕಿಯೋರ್ವಳಿಗೆ ಪೀಡನೆ ನೀಡಿದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿ 18 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹರ್ಯಾಣದ ಮಾಜಿ ಡಿಜಿಪಿ ಎಸ್‌ಪಿಎಸ್ ರಾಥೋರ್ ಅವರ ಅಪರಾಧವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ನ್ಯಾಯಪೀಠವು ರಾಥೋರ್ ಅವರು ಬಂಧನದಲ್ಲಿ ಇದ್ದ ಅವಧಿಯನ್ನು ಶಿಕ್ಷಾ ಅವಧಿ ಎಂದು ಪರಿಗಣಿಸುವಂತೆ ಸೂಚಿಸಿದೆ. 2010ರಲ್ಲಿ ಜಾಮೀನು ದೊರೆಯುವ ಮುನ್ನ ರಾಥೋರ್ ಸುಮಾರು ಆರು ತಿಂಗಳು ಜೈಲಿನಲ್ಲಿದ್ದರು. ಸೆಷನ್ಸ್‌ಕೋರ್ಟ್ ರಾಥೋರ್ ಅವರು ದೋಷಿಯೆಂದು ನಿರ್ಧರಿಸಿ 18 ತಿಂಗಳ ಸೆರೆವಾಸ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರಾಥೋರ್ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಅಪೀಲು ಹೋಗಿದ್ದರು. ಓರ್ವ ಉನ್ನತಮಟ್ಟದ ಅಧಿಕಾರಿಯಾಗಿ ರಾಥೋರ್ ಅವರ ವರ್ತನೆ ‘ನಾಚಿಕೆಗೇಡು’ ಎಂದು ಈ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿತ್ತು.
Next Story





