ಅಶ್ವಿನ್ 2016ರ ಭಾರತದ ಅತ್ಯಂತ ಯಶಸ್ವಿ ಕ್ರಿಕೆಟಿಗ!

ಹೊಸದಿಲ್ಲಿ, ಸೆ.23: ಚೆನ್ನೈನ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ 2016ರ ಋತುವಿನಲ್ಲಿ ಭಾರತದ ಪರ ಗರಿಷ್ಠ ರನ್ ಹಾಗೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಮೂಲಕ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ರ್ಯಾಂಕಿಂಗ್‌ನಲ್ಲಿ ಅಗ್ರಮಾನ್ಯ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.
ಅಶ್ವಿನ್ ಇತ್ತೀಚೆಗಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಲ್ಲೂ ತನ್ನ ಪರಾಕ್ರಮ ತೋರಿಸುತ್ತಿದ್ದಾರೆ. ಐದು ಟೆಸ್ಟ್‌ಗಳಲ್ಲಿ 55ರ ಸರಾಸರಿಯಲ್ಲಿ 275 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳಿವೆ. 17 ವಿಕೆಟ್‌ಗಳನ್ನು ಕಬಳಿಸಿರುವ ಅಶ್ವಿನ್ 2 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಈವರೆಗೆ ಅದ್ಭುತ ಯಶಸ್ಸು ಕಂಡಿದ್ದಾರೆ. 36 ಟೆಸ್ಟ್ ಆಡಿರುವ ಅವರು 190ಕ್ಕೂ ಅಧಿಕ ವಿಕೆಟ್‌ಗಳು, 1,400 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಸರಾಸರಿ 34 ಹಾಗೂ ಬೌಲಿಂಗ್ ಸರಾಸರಿ 25ರಷ್ಟಿದೆ. ಈ ಎಲ್ಲ ಅಂಕಿ-ಅಂಶಗಳು ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಟೆಸ್ಟ್ ತಂಡದಲ್ಲಿ ಅಶ್ವಿನ್ ಅವರಿಗೆ ಎಷ್ಟು ಮಹತ್ವವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.
ಇತ್ತೀಚೆಗೆ ಕೊನೆಗೊಂಡ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರು ಕಪಿಲ್‌ದೇವ್ ಹಾಗೂ ಭುವನೇಶ್ವರ್ ಕುಮಾರ್ ಬಳಿಕ ಟೆಸ್ಟ್ ಸರಣಿಯೊಂದರಲ್ಲಿ ಐದು ವಿಕೆಟ್ ಹಾಗೂ 2 ಅರ್ಧಶತಕ ಬಾರಿಸಿದ ಭಾರತದ ಮೂರನೆ ಆಟಗಾರ ಎನಿಸಿಕೊಂಡಿದ್ದರು. ಅಶ್ವಿನ್ ಈ ತನಕ ನಾಲ್ಕು ಶತಕಗಳನ್ನು ಬಾರಿಸಿದ್ದು, ಎಲ್ಲ ಶತಕಗಳನ್ನು ವೆಸ್ಟ್‌ಇಂಡೀಸ್ ವಿರುದ್ಧವೇ ಗಳಿಸಿದ್ದಾರೆ.
ಅಶ್ವಿನ್ ಉಪ ಖಂಡದ ಹೊರಗೆ ಇನ್ನಷ್ಟೇ ತನ್ನ ಸಾಮರ್ಥ್ಯ ಸಾಬೀತು ಪಡಿಸಬೇಕಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟರೂ ಆಫ್-ಸ್ಪಿನ್ನರ್ ಭಾರತದ ಪರ ಕಳೆದ 4 ಟೆಸ್ಟ್ ಸರಣಿಗಳಲ್ಲಿ ಒಟ್ಟು 74 ವಿಕೆಟ್ ಉರುಳಿಸಿದ್ದಾರೆ. ಈ ಪೈಕಿ ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ 38 ವಿಕೆಟ್ ಪಡೆದಿದ್ದಾರೆ.
ಭಾರತ ಸ್ವದೇಶದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಟೆಸ್ಟ್ ಸರಣಿ ಆಡಲಿದ್ದು, ಕೊಹ್ಲಿ ಪಡೆ ವಿಶ್ವದ ನಂ.1 ತಂಡ ಎನಿಸಿಕೊಳ್ಳಲು ಅಶ್ವಿನ್ ಮುಖ್ಯ ಪಾತ್ರವಹಿಸುವ ಸಾಧ್ಯತೆಯಿದೆ.







