ಮೋದಿ ಮಧ್ಯಪ್ರವೇಶಕ್ಕೆ ಮಠಾಧೀಶರ ಆಗ್ರಹ
ಕಾವೇರಿಗಾಗಿ ಒಂದು ದಿನದ ಉಪವಾಸ ಪೂರ್ಣ

ಬೆಂಗಳೂರು, ಸೆ. 23: ಕರ್ನಾಟಕವು ಬರಗಾಲದಿಂದ ಕಂಗಾಲಾಗಿದ್ದು, ಯಾವ ಪಕ್ಷವೂ ಸ್ವಾರ್ಥ ಸಾಧನೆ ಮಾಡದೆ, ಕಾವೇರಿ ನದಿ ನೀರಿನ ಪರವಾಗಿ ಒಗ್ಗಟ್ಟಾಗಿ ಧ್ವನಿ ಎತ್ತಿ ಜನತೆ ಹಾಗೂ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಪ್ರಧಾನಿಯವರು ಮಧ್ಯ ಪ್ರವೇಶಿಸಿ ಕಾವೇರಿ ಮತ್ತು ಮಹಾದಾಯಿ ನದಿಗಳ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಹಮ್ಮಿಕೊಂಡಿದ್ದ ಒಂದು ದಿನದ ‘ಉಪವಾಸ’ದ ನೇತೃತ್ವವಹಿಸಿ ಅವರು ಮಾತನಾಡುತ್ತಿದ್ದರು.
ಕಾವೇರಿ ನೀರಿಗಾಗಿ ರಾಜ್ಯ ಹೊತ್ತಿ ಉರಿಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಪ್ರತೀಕಾರ ಎಂಬಂತೆ ರಾಜ್ಯದ ವಿರುದ್ಧವಾಗಿ ತೀರ್ಪು ನೀಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿದ್ದ ವೇಳೆ ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕಿತ್ತು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮ ಸಮಸ್ಯೆಗಳನ್ನು ಪ್ರಧಾನಿಗಳಲ್ಲದೆ ಇನ್ಯಾರಿಗೆ ಹೇಳಿಕೊಳ್ಳಬೇಕು ಎಂದು ಸ್ವಾಮೀಜಿ ಪ್ರಶ್ನಿಸಿದರು.
ಆಳುವ ಸರಕಾರಗಳು ನೀರಿನ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ವಂಚನೆ ಎಸಗಿವೆ. ಈಗಲಾದರೂ, ಮಹಾದಾಯಿ ನೀರು ಕೊಡುವ ಮೂಲಕ ಆ ಅಸಮತೋಲವನ್ನು ಸರಿಪಡಿಸಬೇಕು ಎಂದ ಅವರು, ಇನ್ನಾದರೂ ಪ್ರಧಾನಿ ಮಧ್ಯ ಪ್ರವೇಶಿಸಿ ಕಾವೇರಿ ಮತ್ತು ಮಹಾದಾಯಿ ನದಿಗಳ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಪಟ್ಟು ಹಿಡಿದರು.
ಬೇಲಿ ಮಠದ ಶಿವರುದ್ರ ಸ್ವಾಮಿಗಳು ಮಾತನಾಡಿ, ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಸಮಸ್ಯೆಯಿಂದಾಗಿ ನಾವು ಮತ್ತೆ ಮತ್ತೆ ಏಟು ತಿನ್ನಬೇಕಾಗಿದೆ. ತಮಿಳುನಾಡು, ಆಂಧ್ರ ಇತ್ಯಾದಿ ರಾಜ್ಯಗಳಂತೆ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವಿದ್ದರೆ ಇಂಥಾ ದುಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜಕಾರಣಿಗಳು ನೆಲಕ್ಕೆ ಬಿದ್ದ ಹನಿ ಹನಿ ನೀರನ್ನು ಸಂರಕ್ಷಿಸಿಟ್ಟುಕೊಳ್ಳದೆ ಸಮುದ್ರಕ್ಕೆ ಬಿಟ್ಟಿದ್ದರಿಂದಾಗಿ ಈಗ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೂಡಲೇ ಪ್ರಧಾನಿ ಮಧ್ಯ ಪ್ರವೇಶಿಸಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದರು.
ಸ್ವಾಮೀಜಿಗಳ ರಾಜಕೀಯ ಪ್ರವೇಶವಾಗಲಿ: ಇದಕ್ಕೂ ಮೊದಲು ಶೈಲ ಸಾರಂಗಧರ ಮಠದ ಡಾ.ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ಸ್ವಾಮೀಜಿಗಳು ಎಂದರೆ ಕೇವಲ ಸಾನಿಧ್ಯವಹಿಸುವುದು, ಉಪದೇಶ ನೀಡುವುದಕ್ಕೆ ಸೀಮಿತ ಎಂದು ತಿಳಿದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಾವಿರಾರು ಮಠಗಳಿದ್ದು, ಇನ್ನು ಮುಂದಾದರೂ ರಾಜ್ಯದ ಹಿತಕ್ಕಾಗಿ ಸ್ವಾಮೀಜಿಗಳು ಹಾಗೂ ಮಠಾಧೀಶರಿಂದಲೇ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟುಹಾಕಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಚನ್ನಮಲ್ಲ ಸ್ವಾಮೀಜಿ, ದೊಡ್ಡ ಸ್ವಾಮೀಜಿಗಳು ಎನಿಸಿಕೊಂಡ ಬಹಳಷ್ಟು ಸ್ವಾಮೀಜಿಗಳು ಪಾರ್ಟ್ ಟೈಮ್ ಸ್ವಾಮೀಜಿಗಳಾಗಿದ್ದು, ಉಳಿದ ಮುಕ್ಕಾಲು ಸಮಯ ರಾಜಕೀಯದಲ್ಲೇ ತೊಡಗಿರುತ್ತಾರೆ ಎಂದು ಚಟಾಕಿ ಹಾರಿಸಿದರು. ಸ್ವಾಮೀಜಿಗಳು ರಾಜಕೀಯ ಸೇವೆ ಮಾಡಬಾರದು ಎಂಬ ನಿಯಮವೇನೂ ಇಲ್ಲ. ಈಗಾಗಲೇ, ವಿವಿಧ ಧರ್ಮಗಳ ಹಲವಾರು ಸ್ವಾಮೀಜಿಗಳು ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಎಲ್ಲಿಯವರೆಗೆ ಜಾತಿ, ಜನಾಂಗ ಹಾಗೂ ಕರ್ಮಟ ಮಠೀಯತೆಗಳು ಮಠಾಧೀಶರು ಮತ್ತು ಧಾರ್ಮಿಕ ಮುಖಂಡರಿಂದ ಹೋಗುವುದಿಲ್ಲವೋ ಅಲ್ಲಿಯವರೆಗೆ ಇದು ಸಾಧ್ಯವಿಲ್ಲ. ಅಂಥ ಸಮಯಕ್ಕೆ ಇದು ಸೂಕ್ತ ಕಾಲವಲ್ಲ. ಮುಂದೆ ಎಂದಾದರೂ ಅದು ಬರಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮ ಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಬಸವರಾಜ ಪಟ್ಟದಾರ್ಯಶ್ರೀಗಳು, ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಬಸವ ಕಬೀರ ಸ್ವಾಮೀಜಿ, ಆದಿ ಜಾಂಬವ ಮಠದ ಮಾರ್ಕಂಡ ಮುನಿ ಸ್ವಾಮೀಜಿ, ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಮಠದ ನಂಜುಂಡ ಸ್ವಾಮೀಜಿ, ಬಹುಜನ್ ಜ್ಞಾನ ಪ್ರಕಾಶ್ ಸ್ವಾಮೀಜಿ, ಛಲವಾದಿ ಗುರುಪೀಠದ ನಾಗಿದೇವ ಶರಣರು, ಸುನಂದಮ್ಮ ತಾಯಿ, ಶಿವಜ್ಯೋತಿ ತಾಯಿ ಸೇರಿ 50ಕ್ಕೂ ಹೆಚ್ಚು ಮಠಾಧೀಶರು ಹಾಜರಿದ್ದರು.







