ಸಿಖ್ ಕಾರ್ಮಿಕರಿಗೆ ಹೆಲ್ಮೆಟ್‌ನಿಂದ ವಿನಾಯಿತಿಯಿಲ್ಲ: ಕೆನಡ ನ್ಯಾಯಾಲಯ
ಟೊರಾಂಟೊ, ಸೆ. 23: ಕೆಲಸ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಧಾರ್ಮಿಕ ತಾರತಮ್ಯವಾಗುತ್ತದೆ ಎಂದು ವಾದಿಸಿ 10 ವರ್ಷಗಳ ಕಾಲ ಕಾನೂನು ಸಮರ ನಡೆಸಿದ ಕೆನಡದ ಮೂವರು ಸಿಖ್ ಟ್ರಕ್ ಚಾಲಕರಿಗೆ ಸೋಲಾಗಿದೆ. ಅವರಿಗೆ ಯಾವುದೇ ವಿನಾಯಿತಿ ನೀಡಲಾಗದು ಎಂದು ಹೇಳಿರುವ ಕೆನಡದ ನ್ಯಾಯಾಲಯವೊಂದು, ಈ ಚಾಲಕರು ಗಟ್ಟಿ ಹೆಲ್ಮೆಟ್‌ಗಳನ್ನು ಧರಿಸಬೇಕೆಂದು ಆದೇಶ ನೀಡಿದೆ. ಮಾಂಟ್ರಿಯಲ್ ಬಂದರಿನಲ್ಲಿ ಕಂಟೇನರ್ ಟ್ರಕ್‌ಗಳನ್ನು ಚಲಾಯಿಸುವ ಈ ಮೂವರು ಸಿಖ್ಖರು, ಹೆಲ್ಮೆಟ್‌ನ ಬದಲಿಗೆ ತಮಗೆ ಧಾರ್ಮಿಕ ಪೇಟ ಧರಿಸುವ ಹಕ್ಕಿದೆ ಎಂದು ವಾದಿಸಿದ್ದರು. ತಮ್ಮ ವಾದಕ್ಕೆ ಪೂರಕವಾಗಿ, ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸುವ ಕ್ಯೂಬೆಕ್ ಮತ್ತು ಕೆನಡಿಯನ್ ಚಾರ್ಟರ್ ಹಕ್ಕುಗಳನ್ನು ಅವರು ಉಲ್ಲೇಖಿಸಿದ್ದರು. ಬುಧವಾರ ನೀಡಿದ ತೀರ್ಪಿನಲ್ಲಿ, ಹೆಲ್ಮೆಟ್‌ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿರುವುದು ಈ ವ್ಯಕ್ತಿಗಳ ಚಾರ್ಟರ್ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದನ್ನು ಕ್ಯೂಬೆಕ್ ಸುಪೀರಿಯರ್ ಕೋರ್ಟ್‌ನ ನ್ಯಾಯಾಧೀಶ ಆ್ಯಂಡ್ರಿ ಪ್ರೆವೊಸ್ಟ್ ಒಪ್ಪಿಕೊಂಡರು. ಆದರೆ, ಈ ಪ್ರಕರಣದಲ್ಲಿ ಧರ್ಮಕ್ಕಿಂತ ಮೊದಲು ಸುರಕ್ಷತೆ ಬರುತ್ತದೆ ಎಂದು ತೀರ್ಪು ನೀಡಿದರು ಎಂದು ‘ಕೆನಡಿಯನ್ ಪ್ರೆಸ್’ ವರದಿ ಮಾಡಿದೆ.
ತಲೆಗೆ ಆಗುವ ಗಾಯಗಳಿಂದ ಕಾರ್ಮಿಕರಿಗೆ ರಕ್ಷಣೆ ನೀಡುವ ಬಂದರಿನ ನಿಯಮಗಳು ಸಮರ್ಥನೀಯ ಎಂದು ನ್ಯಾಯಾಧೀಶರು ಹೇಳಿದರು. ಹೆಲ್ಮೆಟ್ ಧರಿಸದೆ ಬಂದರಿನ ಒಳಗೆ ತಮ್ಮನ್ನು ಬಿಡುವುದಿಲ್ಲವಾದುದರಿಂದ ತಾವು ಧಾರ್ಮಿಕ ತಾರತಮ್ಯದ ಬಲಿಪಶುಗಳು ಎಂಬುದಾಗಿ ವಾದಿಸಿ 2006ರಲ್ಲಿ ಅವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.





