ಮುಳುಗಿದ ವಲಸಿಗರ ಹಡಗಿನಿಂದ ಇನ್ನೂ 53 ದೇಹಗಳು ಹೊರಕ್ಕೆ
ನೂರಾರು ಮಂದಿ ಇನೂ್ನ ನಾಪತ್ತೆ
ಕೈರೋ, ಸೆ. 23: ಈಜಿಪ್ಟ್ ಕರಾವಳಿಯ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ವಲಸಿಗರ ದೋಣಿಯಿಂದ ರಕ್ಷಣಾ ಕಾರ್ಯಕರ್ತರು ಶುಕ್ರವಾರ 53 ದೇಹಗಳನ್ನು ಹೊರದೆಗೆದರು ಎಂದು ಈಜಿಪ್ಟ್‌ನ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 108ಕ್ಕೇರಿದೆ. ‘‘ಶುಕ್ರವಾರ ಸ್ಥಳೀಯ ಸಮಯ ಬೆಳಗ್ಗಿನ 11 ಗಂಟೆಯ ವೇಳೆಗೆ 53 ಮೃತ ದೇಹಗಳನ್ನು ಮೇಲೆತ್ತಲಾಗಿದೆ’’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಅಬ್ದುಲ್ ಖಲೀಫ ತಿಳಿಸಿದರು. ಸುಮಾರು 600 ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಈಜಿಪ್ಟ್‌ನ ಬುರ್ಗ್ ರಶೀದ್ ಎಂಬ ಗ್ರಾಮದ ಕರಾವಳಿಯಲ್ಲಿ ಬುಧವಾರ ಮುಳುಗಿರುವುದನ್ನು ಸ್ಮರಿಸಬಹುದಾಗಿದೆ.
ರಕ್ಷಣಾ ಕಾರ್ಯಕರ್ತರು 154 ಮಂದಿಯನ್ನು ಬದುಕಿಸಿದ್ದಾರೆ. ಆದರೆ, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಹಡಗು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹೊತ್ತೊಯ್ದದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.
ಈಜಿಪ್ಟ್, ಎರಿಟ್ರಿಯ, ಸುಡಾನ್ ಮತ್ತು ಸೊಮಾಲಿ ನಿರಾಶ್ರಿತರನ್ನು ಹೊತ್ತುಕೊಂಡು ಹಡಗು ಯುರೋಪ್‌ನತ್ತ ಹೋಗುತ್ತಿತ್ತು.





