ಸೆ.27ರಂದು ಮರಳಿಗಾಗಿ ಹೋರಾಟ
.gif)
ಮಂಗಳೂರು, ಸೆ.24: ದ.ಕ. ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಒತ್ತಾಯಿಸಿ ಸೆ.27ರಂದು 12 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮರಳು ಸಾಗಾಟ ಲಾರಿಗಳ ರ್ಯಾಲಿಯೊಂದಿಗೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ದಾಸ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನೆ, ಕಟ್ಟಡಗಳ ನಿರ್ಮಾಣಕ್ಕೆ ಜಿಲ್ಲೆಯ ಜನರಿಗೆ ಮರಳು ಸಿಗುತ್ತಿಲ್ಲ. ಆದರೆ ಹೊರ ಜಿಲ್ಲೆಗಳಿಗೆ ಅವ್ಯಾಹತವಾಗಿ ಮರಳು ಸಾಗಾಟ ನಡೆಯುತ್ತಿದೆ. ಜಿಲ್ಲಾಡಳಿತವು ಮರಳು ನಿಷೇಧದ ನೆಪವೊಡ್ಡಿ ಕೂಲಿ ಕಾರ್ಮಿಕರ, ಕಟ್ಟಡ ಕಾರ್ಮಿಕ ರಿಗೆ ಸಮಸ್ಯೆಯೊಡ್ಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಮರಳು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಸಂಘದ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್‌ನ ಅಧ್ಯಕ್ಷ ವಿನಾಯಕ ಪೈ, ಮಾಜಿ ಅಧ್ಯಕ್ಷ ವಿಜಯ ಮಯ್ಯ, ಸಾಂಪ್ರದಾಯಿಕ ಮರಳು ಉದ್ಯಮಿ ಸುನೀಲ್, ಕರವೇ ಜಿಲ್ಲಾ ಉಪಾಧ್ಯಕ್ಷ ಮಧುಸೂಧನ್ ಗೌಡ ಉಪಸ್ಥಿತರಿದ್ದರು.





