ಸೆ.27: ತರವಾಡು ಸಾಕ್ಷ್ಯ ಚಿತ್ರ ಬಿಡುಗಡೆ
ಪುತ್ತೂರು,ಸೆ.24: ತುಳುನಾಡಿನ ಕುಟುಂಬ ಪದ್ದತಿಯಲ್ಲಿ ಪ್ರಮುಖವಾಗಿರುವ ಮಾತೃ ಪ್ರದಾನ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ‘ತರವಾಡು’ ಕುರಿತ ಸಾಕ್ಷ್ಯ ಚಿತ್ರದ ಬಿಡುಗಡೆ, ಪುಸ್ತಕ ಅನಾವಣ ಮತ್ತು ತರವಾಡಿನ ಹಿರಿಯರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ಸೆ. 27ರಂದು ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ. ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ರಾಮಭಟ್ ಆಶೀರ್ವಾದ ಮಾಡಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ಉಪಪ್ರಧಾನ ವ್ಯವಸ್ಥಾಪಕ ವೈ. ಕುಮಾರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ 8 ಮಂದಿ ಮಹಿಳಾ ಸಾಧಕಿಯರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸನ್ಮಾನ ಮಾಡಲಿದ್ದಾರೆ. ತರವಾಡಿನ ಹಿರಿಯರಾದ ದಂಬೆಕಾನ ಸದಾಶಿವ ರೈ ಅವರ ಹುಟ್ಟು ಹಬ್ಬ ಆಚರಣೆಯನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಇನ್ನೋರ್ವ ಸಂಚಾಲಕ ಚಿದಾನಂದ ಕಾಮತ್ ಕಾಸರಗೋಡು ಉಪಸ್ಥಿತರಿದ್ದರು.





