ಸೌದಿ ವಿರುದ್ಧ ಮಸೂದೆಗೆ ಅಮೆರಿಕ ವೀಟೊ

ವಾಶಿಂಗ್ಟನ್, ಸೆ. 24: 9/11ರ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಸೌದಿ ಅರೇಬಿಯದ ವಿರುದ್ಧ ಮೊಕದ್ದಮೆ ದಾಖಲಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಶುಕ್ರವಾರ ವೀಟೊ (ತಡೆ) ಚಲಾಯಿಸಿದ್ದಾರೆ.
ಆದರೆ, ಅವರ ಈ ಕ್ರಮ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗುವ ಹಾಗೂ ಅಮೆರಿಕದ ಸಂಸತ್ತಾಗಿರುವ ಕಾಂಗ್ರೆಸ್‌ನ ಅವಕೃಪೆಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿದೆ.
2001 ಸೆಪ್ಟಂಬರ್ 11ರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ‘‘ಗಾಢ ಸಹಾನುಭೂತಿ’’ಯನ್ನು ವ್ಯಕ್ತಪಡಿಸಿದ ಒಬಾಮ, ಈ ಮಸೂದೆಯು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕವಾಗಿದೆ ಎಂದು ಹೇಳಿದರು.
ಈ ಮಸೂದೆಯನ್ನು ಕಾಂಗ್ರೆಸ್ ಅವಿರೋಧವಾಗಿ ಅಂಗೀಕರಿಸಿತ್ತು. ಆದರೆ, ಅದನ್ನು ರದ್ದುಪಡಿಸಲು ಅಥವಾ ಅಮೂಲಾಗ್ರವಾಗಿ ಪರಿಷ್ಕರಿಸಲು ಶ್ವೇತಭವನ ಯತ್ನಿಸಿತ್ತಾದರೂ, ತನ್ನ ಪ್ರಯತ್ನದಲ್ಲಿ ಸೋಲು ಕಂಡಿತ್ತು.
ಮಸೂದೆಗೆ ತಡೆ ಹೇರುವ ಒಬಾಮರ ನಿರ್ಧಾರದಿಂದ 9/11ರ ಸಂತ್ರಸ್ತ ಕುಟುಂಬಗಳು ಆಕ್ರೋಶ ಹಾಗೂ ನಿರಾಶೆಗೊಂಡಿವೆ ಎಂದು ಟೆರಿ ಸ್ಟ್ರಾಡ ಎಂಬ ಮಹಿಳೆ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಅವರ ಗಂಡ ಟಾಮ್ ವರ್ಲ್ಡ್ ಟ್ರೇಡ್ ಸೆಂಟರ್‌ನ ಒಂದನೆ ಗೋಪುರದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದರು.
ಒಬಾಮರ ಈ ನಿರ್ಧಾರವನ್ನು ಕಾಂಗ್ರೆಸ್ ಅನೂರ್ಜಿತಗೊಳಿಸುವಂತೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಸಂಘಟಿತವಾಗಿ ಮಾಡುವುದಾಗಿ ಅವರು ಹೇಳಿದರು.
ಒಬಾಮರ ಈ ನಿರ್ಧಾರ ‘‘ಅವಮಾನಕರ’’ ಎಂಬುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಒಬಾಮ ಮತ್ತು ಚುನಾವಣೆಯಲ್ಲಿ ತನ್ನ ಡೆಮಾಕ್ರಟಿಕ್ ಎದುರಾಳಿ ಹಿಲರಿ ಕ್ಲಿಂಟನ್ ಭಯೋತ್ಪಾದನೆಯನ್ನು ಎದುರಿಸುವಲ್ಲಿ ದುರ್ಬಲರಾಗಿದ್ದಾರೆ ಎಂದು ಅವರು ಹೇಳಿದರು.
ಒಬಾಮ ಚಲಾಯಿಸಿರುವ ವೀಟೊವನ್ನು ತೆರವುಗೊಳಿಸಲು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರು ಜೊತೆಗೂಡಿ ಪ್ರಯತ್ನಿಸುವ ಸಾಧ್ಯತೆಯೂ ಇದೆ. ಇದು ಸಂಭವಿಸಿದರೆ, ಒಬಾಮರ ಅಧ್ಯಕ್ಷೀಯ ಅವಧಿಯಲ್ಲಿ ಹೀಗಾಗುವುದು ಪ್ರಥಮ ಬಾರಿಯಾಗಿರುತ್ತದೆ.
9/11ರ ದಾಳಿಯಲ್ಲಿ ಸೌದಿ ಅರೇಬಿಯದ ಕೈವಾಡವಿದೆ ಎಂಬುದಾಗಿ ಆ ದಾಳಿಯ ಸಂತ್ರಸ್ತರ ಕುಟುಂಬ ಸದಸ್ಯರು ಭಾವಿಸಿದ್ದಾರೆ ಹಾಗೂ ಈ ಮಸೂದೆಗಾಗಿ ಸುದೀರ್ಘ ಅಭಿಯಾನ ನಡೆಸಿದ್ದರು.
ದಾಳಿಯಲ್ಲಿ ಸುಮಾರು 3,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.







