ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ನಿಂದ ಪ್ರತಿಭಟನೆ

ಮಂಗಳೂರು, ಸೆ. 24:ಸುಳ್ಳು ಕೇಸು ಜಡಿಯುವ ಮೂಲಕ, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ನ್ಯಾಯ ಕೇಳುತ್ತಿರುವ ವಿದ್ಯಾರ್ಥಿಗಳ ಹೋರಾಟ ದಮನಿಸಲು ಸಾಧ್ಯವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷ ಮುಹಮ್ಮದ್ ತುಫೈಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಬದಲಾವಣೆಗಾಗಿ ಹೆಜ್ಜೆಯಿಡೋಣ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಒಗ್ಗೂಡೋಣ ಎಂಬ ಧ್ಯೇಯದೊಂದಿಗೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ವಿದ್ಯಾರ್ಥಿಗಳನ್ನು ಸಮಾಜಕ್ಕೆ, ದೇಶಕ್ಕೆ ಮಾದರಿ ಮಾಡಬೇಕಾಗ ಕೆಲವು ಶಿಕ್ಷಕರು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇತ್ತೀಚೆಗೆ ಶ್ರೀನಿವಾಸ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದ್ದಾರೆಂದು ಸುಳ್ಳು ದೂರುನೀಡುವ ಮೂಲಕ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರವನ್ನಿಟ್ಟ ವಿದ್ಯಾರ್ಥಿ ಸಂತೋಷ್ ಆಚಾರ್ಯ ಎಬಿವಿಪಿ ವಿದ್ಯಾರ್ಥಿಯಾಗಿದ್ದ ಎಂದು ಉನ್ನತ ಶಿಕ್ಷಣ ಸಚಿವರೆ ಹೇಳಿದ್ದು ಆತನಿಗೆ ಪೊಲೀಸರು ಲಾಠಿಯೇಟು ನೀಡಿಲ್ಲ. ಆದರೆ ನ್ಯಾಯಕ್ಕಾಗಿ ಆಗ್ರಹಿಸಿದ ವಿದ್ಯಾರ್ಥಿಗಳಿಗೆ ಲಾಠಿಯೇಟು ನೀಡುತ್ತಿದ್ದಾರೆ. ಸಂತೋಷ್ ಆಚಾರ್ಯ ಎಬಿವಿಪಿ ವಿದ್ಯಾರ್ಥಿ ಎಂಬ ಕಾರಣಕ್ಕೆ ಮತ್ತು ಆತ ಉನ್ನತ ಜಾತಿಯವನು ಎಂಬ ಕಾರಣಕ್ಕೆ ಆತನ ಮೇಲೆ ಪೊಲೀಸರು ಕೈಮಾಡಿಲ್ಲವೆ ಎಂದು ಪ್ರಶ್ನಿಸಿದರು. ಸುಳ್ಯದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಹಿಜಾಬ್ ವಿರೋಧಿಸಿ ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವುದರಲ್ಲಿ ಅಸಮಾನತೆ ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಧಾರ್ಮಿಕ ಸ್ವಾತಂತ್ರ ಹತ್ತಿಕ್ಕಲು, ಸಂವಿಧಾನವನ್ನು ಹತ್ತಿಕ್ಕಲು ಕೇಸರಿ ಶಾಲು ಧರಿಸಲಾಗುತ್ತಿದೆ ಎಂದರು.
ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೂಲಂಕುಷ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ತಪ್ಸೀರ್ , ಮಂಗಳೂರು ವಿಶ್ವವಿದ್ಯಾನಿಲಯವನ್ನು ರಾಜಕೀಯ ಅಡ್ಡೆ ಮಾಡಲಾಗುತ್ತಿದೆ. ರಾಣಿ ಅಬ್ಬಕ್ಕ ಹೆಸರಿನಲ್ಲಿ ರಾಜಕೀಯ ಕಾರ್ಯಕ್ರಮ ಮಾಡಲಾಗಿದೆ. ವಿವಿಗಳು ಶಿಕ್ಷಣ ಪಡೆಯುವ ಕೇಂದ್ರವೋ ಅಥವ ರಾಜಕೀಯ ಕೇಂದ್ರವೋ ಎಂಬುದು ತಿಳಿಯದಂತಾಗಿದೆ ಎಂದರು.
ಪೆರುವಾಜೆ ಕಾಲೇಜಿನಲ್ಲಿ ಧಾರ್ಮಿಕ ಸ್ವಾತಂತ್ರ ಹತ್ತಿಕ್ಕಲು ಹಿಜಾಬ್ ವಿರುದ್ದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುತ್ತಿದ್ದಾರೆ. ಇನ್ನೊಬ್ಬನ ಧಾರ್ಮಿಕ ಹಕ್ಕನ್ನು ಯಾರು ಕಸಿಯುವಂತಾಗಬಾರದು. ಶಿಕ್ಷಣ ಕೇಂದ್ರಗಳಲ್ಲಿ ಇತ್ತಿಚೆಗೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಹೆಚ್ಚುತ್ತಿದೆ ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ರಘುಧರ್ಮಸೇನ ಅವರು ಮಂಗಳೂರು ವಿವಿಯಲ್ಲಿ ದಲಿತರು, ಮುಸ್ಲಿಂ ವಿದ್ಯಾರ್ಥಿಗಳು ಭಯದಿಂದ ಬದುಕುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಶೌಚಾಲಯದಲ್ಲಿ ಕ್ಯಾಮರ ಇಟ್ಟ ವಿದ್ಯಾರ್ಥಿ ಒಂದು ವೇಳೆ ಮುಸ್ಲಿಂ ಅಥವಾ ದಲಿತ ಆಗಿದ್ದರೆ ದ.ಕ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಶಿಕ್ಷಣ ಮತ್ತು ಸಂವಿಧಾನದ ಮೂಲಕ ಇಂತಹದನ್ನು ಬದಲಾಯಿಸಬೇಕಾಗಿದೆ ಎಂದರು.
ಹಿಜಾಬ್ ಇಸ್ಲಾಮಿಕ್ ಉಡುಗೆ ಅಲ್ಲ. ಹಿಜಾಬ್ ಎನ್ನುವುದು ಸ್ವಾಭಿಮಾನ ಅದು ನಮ್ಮ ಹಕ್ಕಾಗಿದೆ ಎಂದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಮುಹಮ್ಮದ್ ಅಥಾವುಲ್ಲಾ ವಹಿಸಿದ್ದರು. ಪ್ರತಿಭಟನೆಯ ಸಭೆಯ ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯರಾದ ಅಡ್ವೋಕೇಟ್ ಇರ್ಷಾದ್, ಸೂಫಿಯಾನ್ ಮಡಿಕೇರಿ, ಉಡುಪಿ ಜಿಲ್ಲಾಧ್ಯಕ್ಷ ಶಫೀಕ್ , ಜಿಲ್ಲಾ ಪ್ರ.ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್ , ಕೇರಳ ಸ್ಟುಡೆಂಟ್ ಫೋರಂ ಮಂಗಳೂರು ಸಂಚಾಲಕ ಮುಹಮ್ಮದ್ ಅಲಿ , ರಾಜ್ಯ ಕಾರ್ಯದರ್ಶಿ ಶಾಕೀರ್ ಉಪಸ್ಥಿತರಿದ್ದರು.
ಪ್ರತಿಭಟನ ಸಭೆಯ ಮುನ್ನ ನಗರದ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೆರಿಯವರೆಗೆ ವಿದ್ಯಾರ್ಥಿಗಳ ಪ್ರತಿಭಟನ ಮೆರವಣಿಗೆ ನಡೆಯಿತು.
ಪ್ರತಿಭಟನ ಸಭೆಯಲ್ಲಿ ಉರಿಯಲ್ಲಿ ಮಡಿದ ಸೈನಿಕರಿಗೆ ಒಂದು ನಿಮಿಷದ ವೌನ ಪ್ರಾರ್ಥನೆಯನ್ನು ನಡೆಸಲಾಯಿತು.







