ದಲಿತ ಬೌದ್ಧನ ಬರ್ಬರ ಹತ್ಯೆ: ಉದ್ವಿಗ್ನತೆ

ಮುಂಬೈ, ಸೆ.24: ಮಹಾರಷ್ಟ್ರದ ಖಂಡೇಶ್ ವಲಯದ ಧುಳೆ ಜಿಲ್ಲೆಯ ಸಾಲ್ಗಾಂವ್ ಗ್ರಾಮದಲ್ಲಿ ಗುರುವಾರ ಪರಿಶಿಷ್ಟ ಜಾತಿಯ ಬೌದ್ಧ ದಯಾರಾಮ್ ನ್ಯಹಾಲೆ ಎಂಬವರ ಬರ್ಬರ ಹತ್ಯೆ ನಡೆದಿದೆ. ಮೀಸಲಾತಿಗೆ ಆಗ್ರಹಿಸಿ ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಯ ವಿರುದ್ಧ ಬಲಿಷ್ಠ ಜಾತಿ ಗುಂಪಾಗಿರುವ ಮರಾಠರು ರಾಜ್ಯಾದ್ಯಂತ ನಡೆಸುತ್ತಿರುವ ‘ವೌನ ಮೋರ್ಚಾ’ಕ್ಕೆ (ರ್ಯಾಲಿ-ಪ್ರತಿಭಟನೆ) ಈ ಹತ್ಯೆಯನ್ನು ತಳಕು ಹಾಕಲಾಗಿದೆ.
ಸಾಲ್ಗಾಂವ್‌ನ ಬೌದ್ಧರು ಈ ಹತ್ಯೆಯನ್ನು ಪ್ರತಿಭಟಿಸಿದ್ದು, ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಯನ್ವಯ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ದಯಾರಾಮ್‌ರನ್ನು ಫ್ಯಾಶಿಸ್ಟ್ ಶಕ್ತಿಗಳು ಕೊಂದಿವೆ. ಮರಾಠರು ಮಾಡುತ್ತಿರುವುದನ್ನು ವಿರೋಧಿಸುವ ಯಾರಿಗೂ ಉಳಿಗಾಲವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಯಾರಾಮ್ ಇದಕ್ಕೊಂದು ಉದಾಹರಣೆಯೆಂದು ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿರುವ ಸಮಾಜ ಕಾರ್ಯಕರ್ತ ಗರ್ಡೆ ಎಂಬವರು ಆರೋಪಿಸಿದ್ದಾರೆ.
ಸೆ.29ರಂದು ಮರಾಠರಿಂದ ‘ವೌನ ಮೋರ್ಚಾ’ ಒಂದು ನಡೆಯಲಿತ್ತು. ಅದೇ ದಿನ ಎಸ್ಸಿ-ಎಸ್ಟಿ ಕಾಯ್ದೆ ಬೆಂಬಲಿಸಿ ಗ್ರಾಮದ ಬೌದ್ಧರು ಇನ್ನೊಂದು ರ್ಯಾಲಿ ನಡೆಸಲಿದ್ದರು. ದಯಾರಾಮ್ ಬರಂಬಲ ರ್ಯಾಲಿಯ ಆಯೋಜಕರಲ್ಲಿ ಒಬ್ಬರಾಗಿದ್ದರು. ಕೊಲೆಯಾದ ದಿನ ಅವರು ಗ್ರಾಮದ ಯುವಕರನ್ನು ಸಂಘಟಿಸುತ್ತಿದ್ದರು.
ತಾವು ಬೆಂಬಲ ರ್ಯಾಲಿ ನಡೆಸಲಿರುವುದನ್ನು ನಿನ್ನೆ ತಿಳಿದ ಮರಾಠ ಕ್ರಾಂತಿ ಮಂಚದ ಒಬ್ಬ ಸದಸ್ಯ ಸಿಟ್ಟುಗೊಂಡು ತನ್ನ ಸಹೋದ್ಯೋಗಿಗಳನ್ನು ಸೇರಿಸಿದ್ದನು. ಅವರು ದಯಾರಾಮ್‌ನನ್ನು ಸರಪಂಚನ ಮನೆಗೆ ಬರುವಂತೆ ಕರೆದು, ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹತ್ಯೆ ನಡೆಸಿದರೆಂದು ಸಾಲ್ಗಾಂವ್‌ನ ನಿವಾಸಿಯೊಬ್ಬ ಆರೋಪಿಸಿದ್ದಾನೆ.
ಘಟನೆಯ ಕುರಿತು ಬೌದ್ಧರಿಗೆ ತಿಳಿದಾಗ, ತಾವೆಲ್ಲ ಒಂದಾದೆವು. ತಾವೆಲ್ಲ ಈಗ ಎಚ್ಚರಗೊಂಡಿದ್ದೇವೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಕಾಣ ಬಯಸಿದ್ದೇವೆ. ರಾಜ್ಯ ಸರಕಾರ ಇಂತಹ ‘ವೌನ ಮೋರ್ಚಾ’ಗಳಿಗೆ ಅನುಮತಿ ನಿರಾಕರಿಸಬೇಕು. ಅವುಗಳಿಂದ ಪರಿಶಿಷ್ಟರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಂತಕರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ) ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ಅವರಿಗೆ ಮರಣದಂಡನೆ ನಿಡಬೇಕೆಂದು ತಾವು ಆಡಳಿತವನ್ನು ಒತ್ತಯಿಸುತ್ತಿದ್ದೇವೆಂದು ವೈಭವ್ ಗಾಯಕ್‌ವಾಡ್ ಎಂಬ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ದಯಾರಾಮ್‌ನ ಹತ್ಯೆಯನ್ನು ಖಂಡಿಸಿ, ಬೌದ್ಧರೀಗ ಪ್ರತಿಭಟನೆ ನಡೆಸುತ್ತಿದ್ದಾರೆ.







