ಪ್ರಕಾಶ ಮಲ್ಯರಿಗೆ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ

ಉಡುಪಿ, ಸೆ.24: ವಿಜಯಾ ಬ್ಯಾಂಕಿನ ಮಾಜಿ ಅಧ್ಯಕ್ಷ ಪ್ರಕಾಶ ಮಲ್ಯ ಅವರನ್ನು 2016-17ನೇ ಸಾಲಿನ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಣಿಪಾಲದ ಕೆ.ಕೆ.ಪೈ ಟ್ರಸ್ಟಿನ ಕಾರ್ಯದರ್ಶಿ ಡಾ.ಕೆ.ಕೆ.ಅಮ್ಮಣ್ಣಾಯ ಪ್ರಕಟಿಸಿದ್ದಾರೆ.
ಆಯ್ಕೆ ಸಮಿತಿಯು ಪ್ರಕಾಶ ಮಲ್ಯರ ಹೆಸರನ್ನು ಈ ಬಾರಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದು, ಇತ್ತೀಚೆಗೆ ನಡೆದ ಟ್ರಸ್ಟ್ ಸಭೆಯಲ್ಲಿ ಈ ಶಿಫಾರಸ್ಸನ್ನು ಅಂಗೀಕ ರಿಸಲಾಯಿತು. ಸಭೆಯಲ್ಲಿ ಟ್ರಸ್ಟಿಗಳಾದ ಡಾ.ಎಚ್.ಎಸ್.ಬಲ್ಲಾಳ್, ಟಿ. ಅಶೋಕ್ ಪೈ, ಕೆ.ಎಂ.ಉಡುಪ ಮತ್ತು ಡಾ.ಕೆ.ಕೆ.ಅಮ್ಮಣ್ಣಾಯ ಭಾಗವಹಿ ಸಿದ್ದರು.
ಸುರೇಶ್ ಮಲ್ಯ 2006ರಿಂದ 2008ರವರೆಗೆ ವಿಜಯಾ ಬ್ಯಾಂಕಿನ ಅಧ್ಯಕ್ಷ ರಾಗಿ ಬ್ಯಾಂಕಿನ ಸರ್ವತೋಮುಖ ಪ್ರಗತಿಗೆ ಕಾರಣರಾಗಿದ್ದರು. ವಿಜಯಾ ಬ್ಯಾಂಕಿನ ಅಧ್ಯಕ್ಷರಾಗುವ ಮೊದಲು ಪ್ರಕಾಶ ಮಲ್ಯ ಸಿಂಡಿಕೇಟ್ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1973ರಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಯಾಗಿ ಬ್ಯಾಂಕಿಂಗ್ ಸೇವೆ ಆರಂಭಿಸಿದ ಪ್ರಕಾಶ ಮಲ್ಯ, ಮುಂದೆ ಅಲ್ಲಿ ಜನರಲ್ ಮೇನೇಜರ್ ಸೇರಿದಂತೆ ಹಲವಾರು ಜವಾಬ್ದಾರಿಯುತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು.
ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ುಲ್ಯ, ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ.ವಿ.ಎಂ. ದಾಂಡೇಕರ್ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈ ಗೊಂಡಿದ್ದರು. ಪುಣೆಯ ಗೋಕಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಎರಡು ವರ್ಷ ಸಂಶೋಧಕರಾಗಿದ್ದ ಇವರು ಬ್ಯಾಂಕಿಂಗ್ ವಿಷಯದ ಕುರಿತು ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದರು.
ಪ್ರಕಾಶ ಮಲ್ಯರು ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. 2006ರಲ್ಲಿ ಬ್ಯಾಂಕಿಂಗ್ ಉತ್ಕೃಷ್ಠತೆಗಾಗಿ ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್‌ನ ಆವಿಷ್ಕಾರ ನಾಯಕ ಪ್ರಶಸ್ತಿ, ದೆಹಲಿ ಕನ್ನಡಿಗ ನೀಡಿದ ಟಿ.ಎ.ಪೈ ಬ್ಯಾಂಕಿಂಗ್ ಉತ್ಕೃಷ್ಠತಾ ಪ್ರಶಸ್ತಿ ಇವುಗಳಲ್ಲಿ ಸೇರಿವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಲೂ ಸಕ್ರಿಯರಾಗಿರುವ ಪ್ರಕಾಶ ಮಲ್ಯರು, ಸದ್ಯ ಲಕ್ಷ್ಮೀವಿಲಾಸ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ. ಇವರಿಗೆ ಕೆ.ಕೆ.ಪೈ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 9ರಂದು ಸಂಜೆ 4:00 ಗಂಟೆಗೆ ಮಣಿಪಾಲದ ಟ್ಯಾಪ್ಮಿಯಲ್ಲಿ ನಡೆಯಲಿದೆ ಎಂದು ಡಾ.ಕೆ.ಕೆ. ಅಮ್ಮಣ್ಣಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





