ಮೆಡಿಕ್ವಿಜ್ 2016 ವೈದ್ಯಕೀಯ ರಸ ಪ್ರಶ್ನಾ ಸ್ಪರ್ಧಾ ಕೂಟ
ಅಕ್ಷಯ್, ದೀಪ್ತಿ ತಂಡಕ್ಕೆ ಪ್ರಶಸ್ತಿ

ಮಂಗಳೂರು ಸೆ. 24 ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಾಸ್ತ್ರದ ಬಗ್ಗೆ 5ನೆ ವಾರ್ಷಿಕ ಮೆಡಿಕ್ವಿಜ್ 2016 ರಸ ಪ್ರಶ್ನಾ ಸ್ಪರ್ಧಾ ಕೂಟವು ಕಾಲೇಜಿನ ಸಭಾಂಗಣದಲ್ಲಿ ಇಂದು ಜರಗಿತು.
ಪ್ರಾಂಶುಪಾಲ ಡಾ.ಅಶೋಕ್ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ನಿಯತಕಾಲಿಕವಾಗಿ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿದರೆ ವೈದ್ಯಕೀಯ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ವೈದ್ಯಕೀಯ ರಸ ಪ್ರಶ್ನಾ ಸ್ಪರ್ಧಾ ಕೂಟದಲ್ಲಿ ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದ 8 ತಂಡಗಳನ್ನು ಅಭಿನಂದಿಸಿ, ಸ್ಪರ್ಧಾ ಕೂಟದ ಪ್ರಥಮ ಸ್ಥಾನ ವಿಜೇತ ಅಕ್ಷಯ್ ಮತ್ತು ದೀಪ್ತಿ (90 ಅಂಕ) ಜೋಡಿ ತಂಡದವರಿಗೆ, ಮತ್ತು ದ್ವಿತೀಯ ಸ್ಥಾನ ಪಡೆದ ವಲೀಶ್ ಶೆಣೈ ಮತ್ತು ಜೀಷ್ಣು ಚಟರ್ಜಿ ತಂಡಕ್ಕೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ಪ್ರದಾನ ಮಾಡಿ ವಿಜೇತರ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿದರು.
ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ರಮೇಶ್ ಪೈ ಉಪಸ್ಥಿತರಿದ್ದರು. ಪ್ರಾಧ್ಯಾಪಾಕ ಡಾ. ದೇವದಾಸ್ ರೈ ಅವರು ಸ್ಪರ್ಧಾ ಕೂಟವನ್ನು ನಿರೂಪಿಸಿ 22 ಅಕ್ಟೋಬರ್‌ನಲ್ಲಿ ಅಂತರ್ ವೈದ್ಯಕೀಯ ಕಾಲೇಜ್ ರಸ ಪ್ರಶ್ನಾ ಸ್ಪರ್ಧಾ ಕೂಟವನ್ನು ಆಯೋಜಿಸಲಾಗುವುದು ಎಂದರು.
ಸ್ಪರ್ಧಾ ಕೂಟದಲ್ಲಿ ಕಾಲೇಜಿನ 22 ಜೋಡಿ ತಂಡಗಳು ಪ್ರಾಥಮಿಕ ಹಂತದಲ್ಲಿ ಭಾಗವಹಿಸಿದ್ದವು. 8 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು. ಡಾ.ವಿನಿತ ಮತ್ತು ಡಾ.ಕಾರ್ತಿಕ್ ಅಂಕಗಾರಗಿ ಸ್ಪರ್ಧಾ ಕೂಟಕ್ಕೆ ಸಹಕರಿಸಿದ್ದರು. ಡಾ.ಅಶ್ವತಿ ಸ್ವಾಗತಿಸಿ, ವಂದಿಸಿದರು. ಸ್ಪರ್ಧಾ ಕೂಟವನ್ನು ಜುವೆಂಟಿಸ್ ಹೆಲ್ತ್‌ಕೆರ್ ಸಂಸ್ಥೆ ಪ್ರಾಯೋಜಿಸಿತ್ತು.





