ಸಂಸತ್‌ನಲ್ಲಿ ಅಂಗೀಕಾರವಾದ 43 ಕಾಯ್ದೆಗಳು ಇನ್ನೂ ಜಾರಿಯಾಗಿಲ್ಲ!

ಹೊಸದಿಲ್ಲಿ, ಸೆ.24: ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಎಲ್ಲ ಮಸೂದೆಗಳು ದೇಶಾದ್ಯಂತ ಜಾರಿಗಾಗಿ ನಿಯಮಗಳಾಗಿ ಬದಲಾಗಿವೆಯೆಂದು ನೀವು ಭಾವಿಸಿದ್ದೀರಾದರೆ, ಇನ್ನೊಮ್ಮೆ ಯೋಚಿಸಿ! ಕಳೆದ ಜುಲೈಗೆ ಮೊದಲೇ ಮಂಜೂರಾಗಿರುವ ಸುಮಾರು 43 ಕಾಯ್ದೆಗಳು, ಆಡಳಿತ ಇಲಾಕೆಯು ಅವುಗಳ ನಿಯಮಾವಳಿಗಳನ್ನು ರಚಿಸದ ಕಾರಣ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ!
31 ಹೊಸ ಮಸೂದೆಗಳು ಹಾಗೂ 12 ತಿದ್ದುಪಡಿ ಕಾಯ್ದೆಗಳು ಸಂಪೂರ್ಣ ಅಥವಾ ಭಾಗಶಃ ಸರಖಾರಿ ಆದೇಶವಾಗಿ ಬದಲಾಗಿಲ್ಲವೆಂಬುದನ್ನು ಉಪ ಕಾಯ್ದೆ ಸಮಿತಿಯ 2 ವರ್ಷಗಳ ಪರಿಶೀಲನೆಯೊಂದು ತೋರಿಸಿದೆ. ಅವುಗಳಲ್ಲಿ 2014ರ ಮೇಯಲ್ಲಿ ಅನುಮೋದನೆ ಪಡೆದಿರುವ, ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ರಕ್ಷಣಾ ಕಾಯ್ದೆಯೂ ಸೇರಿದ್ದು, ಇಂದಿನವರೆಗೆ ಅದರ ನಿಯಮಾವಳಿಯನ್ನು ಅಧಿಸೂಚಿಸಲಾಗಿಲ್ಲ.
ಭಾರತದ ಸಾರ್ವಭೌಮತೆ, ಸಮಗ್ರತೆ ಹಾಗೂ ರಕ್ಷಣೆಗೆ ಧಕ್ಕೆ ತರುವಂತಹ ವಿಷಯಗಳ ಬಹಿರಂಗಪಡಿಸುವಿಕೆಯ ವಿರುದ್ಧ ರಕ್ಷಣೆಯಂತಹ ವಿಚಾರಗಳನ್ನು ಅದರಲ್ಲಿ ಸೇರಿಸಬೇಕಾಗಿದೆ.
ಶಕ್ತಿ ಸಂರಕ್ಷಣಾ ಕಾಯ್ದೆ (ಸೆ.2001) ಹಾಗೂ 2010ರ ಆಗಸ್ಟ್‌ನಲ್ಲಿ ಅದಕ್ಕಾದ ತಿದ್ದುಪಡಿಗಳು ಕೇವಲ ಭಾಗಶಃವಷ್ಟೇ ನಿಯಮಗಳಾಗಿದೆ. ಕೇಂದ್ರೀಯ ಜಾಗೃತ ಆಯೋಗ ಕಾಯ್ದೆಗೆ (ಸೆ.2003) ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯನ್ನು ಜೋಡಿಸುವ ನಿಯಮಗಳ ರಚನೆಯಾಗಿಲ್ಲ. ಪದವಿ ನೀಡಿಕೆ, ಸಿಬ್ಬಂದಿ ಸೇವಾ ಪರಿಸ್ಥಿತಿ, ಪ್ರವೇಶ ಪ್ರಕ್ರಿಯೆ, ಅಧ್ಯಯನದ ಕೋರ್ಸ್ ಹಾಗೂ ಸಂವಿಧಾನ, ವಿಶ್ವವಿದ್ಯಾಲಯದ ಅಧಿಕಾರಿಗಳಿಗಿರುವ ಅಧಿಕಾರ ಹಾಗೂ ಕಾರ್ಯಗಳ ನೀತಿ ಸಂಹಿತೆಯಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಕಾಯ್ದೆ (ಮಾ.2009) ಪರಿವರ್ತನೆಗೊಂಡಿಲ್ಲ.
ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ ಹಾಗೂ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣಗಳ ರಚನೆಯಾಗದಿರುವುದರಿಂದ ಕಂಪೆನಿ ಕಾಯ್ದೆಯ )ಆ.2013) ಕನಿಷ್ಠ 177 ಪರಿಚ್ಛೇದಗಳ ನಿಯಮಾವಳಿ ರಚನೆ ತಡೆಹಿಡಿಯಲ್ಪಟ್ಟಿದೆ.







