ಬಾಲಕ ಚಿರತೆಗೆ ಬಲಿ

ನಾಶಿಕ್, ಸೆ.24: ಚಿರತೆಯ ದಾಳಿಯಿಂದ ಸಾಯಿಖೇಡದ ಸಮೀಪ ನಾಲ್ಕರ ಹರೆಯದ ಬಾಲಕನೊಬ್ಬ ಸಾವಿಗೀಡಾಗಿದ್ದಾನೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಾಯಿಖೇಡ ಸಮೀಪದ ಕುಟೆವಸ್ತಿಯ ನಿವಾಸಿ, ಸಾರ್ಥಕ್ ಸೋಸಲೆ ಎಂಬ ಬಾಲಕ, ನಿನ್ನೆ ಸಂಜೆ ತನ್ನ ಕುಟುಂಬಿಕರು ಕೆಲಸ ಮಾಡುತ್ತಿದ್ದ ಕಬ್ಬಿನ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆಯೆಂದು ಅವರು ಹೇಳಿದ್ದಾರೆ.
ಬಾಲಕನ ಮೇಲೆ ಚಿರತೆ ದಾಳಿ ಮಾಡಿದೊಡನೆಯೇ ಆತನ ಅಜ್ಜಿ ಬೊಬ್ಬೆ ಹೊಡೆದಿದ್ದಾರೆ. ಆದರೆ, ಸ್ಥಳೀಯರು ಸ್ಥಳಕ್ಕೆ ತಲುಪುವುದರೊಳಗಾಗಿ ಚಿರತೆಯು ಬಾಲಕನನ್ನು ದಟ್ಟ ಕಾಡಿನೊಳಗೆ ಎಳೆದೊಯ್ದಿತ್ತು.
ಬಾಲಕನನ್ನು ರಕ್ಷಿಸಲು ಬಂದಿದ್ದ ಭಾರೀ ಗುಂಪನ್ನು ಕಂಡೊಡನೆ ಚಿರತೆ ಕಾಡಿನಲ್ಲಿ ಕಣ್ಮರೆಯಾಯಿತು. ಆತನನ್ನು ಚಂದೋರಿ ಗ್ರಾಮದ ಆಸ್ಪತ್ರೆಗೆ ಒಯ್ಯಲಾಯಿತಾದರೂ, ಬಾಲಕ ಅದಾಗಲೇ ಕೊನೆಯುಸಿರೆಳೆದಿದ್ದಾನೆಂದು ವೈದ್ಯರು ಘೋಷಿಸಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗೀಯ ಅರಣ್ಯಾಧಿಕಾರಿ ರಾಮಾನುಜಂ ಮತ್ತವರ ತಂಡ ಸ್ಥಳಕ್ಕೆ ಧಾವಿಸಿದೆ.
ಚಿರತೆಯನ್ನು ಸೆರೆ ಹಿಡಿಯಲು ಬಯಲಲ್ಲಿ ಗೂಡೊಂದನ್ನಿರಿಸಿದ್ದೇವೆ. ಈ ಹಿಂದೆ, ಈ ಸ್ಥಳದ ಕೇವಲ ಕಿ.ಮೀ. ದೂರದಲ್ಲಿ 2 ಪಂಜರಗಳನ್ನಿರಿಸಲಾಗಿತ್ತೆಂದು ವಲಯ ಅರಣ್ಯಾಧಿಕಾರಿ ಬಿ.ಆರ್.ಢಕ್ರೆ ಹೇಳಿದ್ದಾರೆ.







