ಕೋಮು ದ್ವೇಷ ಹರಡುವವರ ಮೇಲೆ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ

ಸುಳ್ಯ,ಸೆ.24:ರಾಜಕೀಯ ಲಾಭಕ್ಕಾಗಿ ಕೋಮು ದ್ವೇಷವನ್ನು ಹರಡಿ ಸುಳ್ಯ ತಾಲೂಕಿನಾದ್ಯಂತ ಕೋಮು ಗಲಭೆಗಳನ್ನು ಸೃಷ್ಠಿಸಲು ಸಂಘ ಪರಿವಾರದವರು ಯತ್ನಿಸುತ್ತಿದ್ದು ಅವರ ಮೇಲೆ ಕಠಿನ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಸುಳ್ಯ ಘಟಕ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಕೋಮು ದ್ವೇಷ ಹರಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕಾದ ಕಾಂಗ್ರೆಸ್ ಸರ್ಕಾರ ಕೂಡಾ ಮೌನವಾಗಿದೆ ಎಂದು ದೂರಿದರು. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಇಚ್ಛೆಯಿಂದ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಕೆಲವೊಂದು ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಸಂಘಪರಿವಾರ ಅಶಾಂತಿಯನ್ನು ಉಂಟು ಮಾಡಲು ಯತ್ನಿಸುತ್ತಿದೆ. ಸ್ಕಾರ್ಫ್ ಧರಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಕುಮ್ಮಕ್ಕಿನಿಂದ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ವಿವಾದ ಸೃಷ್ಟಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯವನ್ನು ಕೆದಕಿ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಿತರಾಗುವುದನ್ನು ತಪ್ಪಿಸಲು ಸಂಘಪರಿವಾರ ಷಡ್ಯಂತ್ರ ರೂಪಿಸಿದೆ. ಇದರ ಮುಂದುವರಿದ ಭಾಗವಾಗಿ ಕಾಲೇಜಿನ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡಿ ಅಶಾಂತಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಮಾತ್ರ ಮೌನವಹಿಸಿದೆ ಎಂದವರು ದೂರಿದರು.
ಬಲವಂತದಿಂದ ಮತಾಂತರಗೊಳಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿ ಹಿಂದೂ ಅಂಗಡಿಗಳನ್ನು ಮಾತ್ರ ಬಂದ್ ಮಾಡಲು ಕರೆ ನೀಡಿ ಪ್ರತಿಭಟನೆ ಹಮ್ಮಿಕೊಂಡಿದ್ದು, ರ್ಯಾಲಿಯಲ್ಲಿ ಬರುವಾಗ ಬಲವಂತದಿಂದ ಮುಸ್ಲಿಂ ಅಂಗಡಿಗಳನ್ನು ಬಂದ್ ಮಾಡಿಸಿ ಅವಾಚ್ಯ ಶಬ್ದಗಳಿಂದ ಧರ್ಮವನ್ನು ನಿಂದಿಸಿ, ಮುಸ್ಲಿಂ ಮಹಿಳೆಯರ ಕಡೆ ತೋರಿಸಿ ನೀಚ ಶಬ್ದಗಳಿಂದ ಘೋಷಣೆ ಕೂಗಿದ್ದು, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಕೋಮು ಗಲಭೆ ಸೃಷ್ಠಿಸಲು ಯತ್ನಿಸಿದ್ದಾರೆ. ಪೊಲೀಸ್ ಇಲಾಖೆಯ ವೈಫಲ್ಯವೂ ಇಲ್ಲಿ ಎದ್ದು ಕಾಣುತ್ತಿದೆ. ನಂತರ ನಡೆದ ಸಭೆಯಲ್ಲೂ ಪ್ರಚೋದನಕಾರಿಯಾಗಿ ಭಾಷಣ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಸೇರಿಸಿ ಅವರ ಮನಸ್ಸಿನಲ್ಲಿ ಕೋಮು ವೈಷಮ್ಯವನ್ನುಂಟು ಮಾಡಲಾಗಿದೆ ಎಂದವರು ಆರೋಪಿಸಿದರು.
ಸ್ವಆಸಕ್ತಿಯಿಂದ ಯಾವುದೇ ಧರ್ಮವನ್ನು ಸೇರುವುದು ಅವರವರಿಗೆ ಬಿಟ್ಟ ವಿಚಾರ. ಸುಳ್ಯದ ಮೂವರು ಮುಸ್ಲಿಂ ಯುವತಿಯರು ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಯಾವುದೂ ಪ್ರತಿಭಟನೆಗಳಾಗಲಿ, ರ್ಯಾಲಿಗಳಾಗಲಿ ನಡೆದಿಲ್ಲ ಎಂದು ಸುಳ್ಯ ನಗರ ಪಂಚಾಯಿತಿ ಸದಸ್ಯ ಕೆ.ಎಸ್.ಉಮ್ಮರ್ ಹೇಳಿದರು. ಪಕ್ಷದ ನಗರ ಸಮಿತಿ ಕೋಶಾಧಿಕಾರಿ ಸತ್ತಾರ್ ಸಂಗಂ, ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ರಝಾಕ್, ಸಿದ್ದೀಕ್ ಬೆಳ್ಳಾರೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







