ಯುವಕವಿಗಳು ಮಿತಿಗಳನ್ನು ದಾಟಬೇಕು: ಸಿದ್ದಲಿಂಗ ಸ್ವಾಮಿ
‘ನಾನೂ ಹೆಣ್ಣಾಗಬೇಕಿತ್ತು’ ಕವನ ಸಂಕಲನ ಲೋಕಾರ್ಪಣೆ
ಅಂಕೋಲಾ, ಸೆ.24: ಗಂಡು ಹೆಣ್ಣಾಗಬೇಕಿತ್ತು ಎಂಬ ಬಯಕೆಯನ್ನು ವ್ಯಕ್ತಪಡಿಸಲು ತುಂಬಾ ಧೈರ್ಯಬೇಕು. ನಾನೂ ಹೆಣ್ಣಾಗಬೇಕಿತ್ತು.... ಎಂಬ ಕವನ ಸಂಕಲನದ ಮೂಲಕ ಸಚಿನ್ ಅಂಕೋಲಾ ಅವರು ಅಂತಹ ಧೈರ್ಯವನ್ನು ಮಾಡಿದ್ದಾರೆ ಎಂದು ಸಾಹಿತಿ, ಜಿ.ಸಿ. ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ ಹೇಳಿದ್ದಾರೆ. ಅವರು ಇಲ್ಲಿಯ ಪಿ.ಎಂ.ಜೂನಿಯರ್ ಕಾಲೇಜಿನಲ್ಲಿ ನವ ಕರ್ನಾಟಕ ಸಂಘದ ಆಶ್ರಯದಲ್ಲಿ ಸಚಿನ್ ಅಂಕೋಲಾ ಅವರ, ‘ನಾನೂ ಹೆಣ್ಣಾಗಬೇಕಿತ್ತು’ ಎಂಬ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಹಿಂದಿನಿಂದಲೂ ಪ್ರಭುತ್ವ ಹಾಗೂ ಕವಿಗಳ ನಡುವೆ ಸಂಘರ್ಷ ನಡೆದುಕೊಂಡೇ ಬಂದಿದೆ. ಅಂತಹ ಸಂಘರ್ಷಗಳು ಆಗಾಗ ಕಂಡುಬರುತ್ತದೆ. ಇಂದಿನ ಯುವ ಕವಿಗಳು ಇಂತಹ ಮಿತಿಗಳನ್ನು ದಾಟಿ ತಮ್ಮ ಕಾವ್ಯೋದ್ಯೋಗವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಸಚಿನ್ ಅವರ ಕವನಗಳು ಶ್ರಮಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವ್ಯವನ್ನು ಸೃಜಿಸುವ ಕವಿ ಗಂಡಾದರೂ ಹೆಣ್ಣಿನ ಮನಸ್ಥಿತಿಯನ್ನು ಹೊಂದಿರಬೇಕಾದ ಆವಶ್ಯಕತೆಯಿದೆ. ಕಿ.ರಂ. ನಾಗರಾಜ ಅವರು ಹೇಳಿದಂತೆ, ಯುದ್ಧವು ಮಾನವ ಲೋಕದ ಮಾಯದ ಗಾಯ. ಯುದ್ಧ ಆರಂಭವಾಗುವುದಕ್ಕೆ ಬಹಳಷ್ಟು ಕಾರಣಗಳಿರುವುದಿಲ್ಲ ಎಂದರು. ಪುಸ್ತಕವನ್ನು ಸಾಹಿತಿ ನಾಗಪತಿ ಹೆಗಡೆ ಪರಿಚಯಿಸಿ ಮಾತನಾಡಿ, ಸಚಿನ್ ಅವರ ಕವಿತೆಗಳ ಧೋರಣೆ ಅವರ ಶ್ರಮಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅವರಲ್ಲಿರುವ ಆರೋಗ್ಯಪೂರ್ಣ ಮನಸ್ಥಿತಿಯ ದ್ಯೋತಕವಾಗಿವೆ. ಅಲ್ಲಲ್ಲಿ ಕ್ರಾಂತಿಯ ಕಿಡಿಗಳು ಪ್ರಜ್ವಲಿಸಿದರೂ ಹೆಚ್ಚಿನ ಕವನಗಳಲ್ಲಿ ಅವರ ಪ್ರಗತಿಪರ ನಿಲುವು ಅನಾವರಣಗೊಂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯಮುನಾ ಗಾಂವ್ಕರ ಅವರು, ಸಚಿನ್ ಅವರ ಕವನಗಳಲ್ಲಿ ಅನಾವರಣಗೊಂಡಿರುವ ಅಭಿಪ್ರಾಯಗಳ ಕುರಿತು ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಪ್ರಭುತ್ವವು ಸಾಹಿತಿಗಳ ಬರವಣಿಗೆಯ ಮೇಲೆ ನಿರ್ಬಂಧ ವಿಧಿಸಬಾರದೆಂದು ತಿಳಿಸಿದರು. ಪಿ.ಎಂ.ಜೂನಿಯರ್ ಕಾಲೇಜಿನ ಪ್ರಾಚಾರ್ಯ ಪಾಲ್ಗುಣ ಗೌಡ ಅವರು ಕವಿಯಾದವನಿಗೆ ಅವನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರವಿರಬೇಕು. ಸರಕಾರಗಳು ಪುಸ್ತಕಗಳನ್ನು ನಿರ್ಬಂಧಿಸುವಂತಹ ಕೆಲಸ ಮಾಡಬಾರದೆಂದು ಅಭಿಪ್ರಾಯಪಟ್ಟರು. ಕೃತಿಕಾರ ಸಚಿನ್ ತಮ್ಮ ಭಾವನೆಗಳನ್ನು ಹಂಚಿಕೊಂಡರು. ನವ ಕರ್ನಾಟಕ ಸಂಘದ ಕಾರ್ಯದರ್ಶಿ ಶ್ಯಾಮಸುಂದರ ಗೌಡ ಸ್ವಾಗತಿಸಿದರು. ಸದಸ್ಯೆ ನಿರುಪಮಾ ನಿರ್ವಹಿಸಿದರು. ಯುವ ಕವಯಿತ್ರಿ ವಿಭಾ ನಾರಾಯಣ ವಂದಿಸಿದರು.







