ನಿವೇಶನ ಒದಗಿಸಲು ಆಗ್ರಹಿಸಿ ಧರಣಿ

ತೀರ್ಥಹಳ್ಳಿ, ಸೆ.24: ಪಟ್ಟಣದ ಸಿದ್ದೇಶ್ವರ ಬಡಾವಣೆಯ 25ಕ್ಕೂ ಹೆಚ್ಚು ಕುಟುಂಬಗಳು ಕಳೆದ 30 ವರ್ಷಗಳಿಂದ ಕೂಲಿ ಕೆಲಸ ನಿರ್ವಹಿಸಿಕೊಂಡು ಅಲ್ಲಿಯೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ವಾಸಿಸುತ್ತಿರುವ ಬಡವರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಕರಾ ದಸಂಸ ತೀರ್ಥಹಳ್ಳಿ ಶಾಖೆ ಪಟ್ಟಣದ ಸಿದ್ದೇಶ್ವರ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ತಾಲೂಕು ಕಚೆೇರಿ ಮುಂಭಾಗದಲ್ಲಿ ಧರಣಿ ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತೀರ್ಥಹಳ್ಳಿ ಶಾಖೆಯ ಅಧ್ಯಕ್ಷ ನಾಗರಾಜ್, ಸಿದ್ದೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವವರು ಹೆಚ್ಚಾಗಿ ದಲಿತ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಇವರ ಬಳಿ ರೇಷನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್, ವಾಸ ದೃಢೀಕರಣ ಪತ್ರ ಎಲ್ಲವೂ ಇದ್ದು ಮುಳುಬಾಗಿಲು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಎಲ್ಲರೂ ವಸತಿ ಹೀನರಾಗಿದ್ದು, ಇಲ್ಲಿಯವರೆಗೆ ಸರಕಾರದಿಂದ ಯಾವುದೇ ರೀತಿಯ ವಸತಿ ನೆರವು ಇವರಿಗೆ ದೊರಕಿರುವುದಿಲ್ಲ ಎಂದರು.
ಮುಳುಬಾಗಿಲು ಗ್ರಾಪಂ ವ್ಯಾಪ್ತಿಯ ಸ.ನಂ. 68ರಲ್ಲಿ ಕಂದಾಯ ಇಲಾಖೆಗೆ ಸೇರಿದ 2 ಎಕರೆ ಖಾಲಿ ಜಾಗವಿದ್ದು, ಈ ಜಾಗದಲ್ಲಿ ಕಳೆದ 15-20 ವರ್ಷಗಳಿಂದ ಮೇಲ್ಕಂಡ ನಿವಾಸಿಗಳು ಜಾಗ ಗುರುತು ಮಾಡಿ ಬೇಲಿ ನಿರ್ಮಿಸಿದ್ದು, ಹಕ್ಕನ್ನು ಕೊಡಲು ತಾಲೂಕು ಆಡಳಿತ ಸತಾಯಿಸುತ್ತಿದೆ. ಕೂಡಲೇ ತಾಲೂಕು ಆಡಳಿತ ನಿವೇಶನರಹಿತರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿದರು.
ಕಾಲ್ನಡಿಗೆ ಜಾಥಾದ ಮೂಲಕ ಸಿದ್ದೇಶ್ವರ ಬಡಾವಣೆಯಿಂದ ತಾಲೂಕು ಕಚೆೇರಿಗೆ ಆಗಮಿಸಿದ ಧರಣಿನಿರತರು ತಾಲೂಕು ಕಚೇರಿಯಲ್ಲಿ ಕೆಲಕಾಲ ತಮಟೆ ವಾದ್ಯ ನುಡಿಸಿ ಗಮನ ಸೆಳೆದರು. ಧರಣಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್, ಹೊಸನಗರ ಸಮಿತಿಯ ಯೋಗಾನಂದ, ಕೆ.ವಿ.ರಾಮು ಮತ್ತಿತರರು ಪಾಲ್ಗೊಂಡಿದ್ದರು.







