ನೂತನ ಕಾಫಿ ಕಾಯ್ದೆಗೆ ಜಿಲ್ಲಾ ಕಾಂಗ್ರೆಸ್ ಆಕ್ಷಪ
ಅ.1ಕ್ಕೆ ಪ್ರತಿಭಟನೆ
ಮಡಿಕೇರಿ, ಸೆ.24: ಕೇಂದ್ರ ಸರಕಾರ ಜಾರಿಗೆ ತರಲು ನಿರ್ಧರಿಸಿರುವ ನೂತನ ಕಾಫಿ ಕಾಯ್ದೆಯಿಂದ ಕಾಫಿ ಬೆಳೆಗಾರರು ಮುಂದಿನ ದಿನಗಳಲ್ಲಿ ತೀವ್ರ ತೊಂದರೆಯನ್ನು ಅನುಭವಿಸಲಿದ್ದು, ಸಾಕಷ್ಟು ಕಷ್ಟ, ನಷ್ಟಗಳಿಗೆ ಒಳಗಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಕಾಯ್ದೆಯಿಂದ ಬೆಳೆಗಾರರಿಗೆ ಯಾವುದೇ ಲಾಭವಿಲ್ಲವೆಂದು ಹೇಳಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಭಾರ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆ ನೂತನ ಕಾಯ್ದೆಯನ್ನು ಕೈಬಿಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿತು.
ಈ ಸಂಬಂಧ ಅ.1 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೆೇರಿ ಎದುರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದೆಂದು ಟಿ.ಪಿ. ರಮೇಶ್ ತಿಳಿಸಿದರು.
ಕಾಫಿಗೆ ಸಂಬಂಧಿಸಿದ ನೂತನ ಕಾಯ್ದೆಯನ್ನು ಕೈಬಿಡಬೇಕು ಮತ್ತು ಕಾವೇರಿ ನದಿ ನೀರಿನ ವಿವಾದವನ್ನು ಬಗೆಹರಿಸಲು ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕೆಂದು ಪ್ರತಿಭಟನೆಯ ಸಂದರ್ಭ ಒತ್ತಾಯಿಸಲಾಗುವುದೆಂದು ತಿಳಿಸಿರುವ ಅವರು, ಕಾಫಿ ಬೆಳೆಗಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಕಂದಾಯ ಸಚಿವರು ಕಳೆದ ವಾರ ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲೆಯ ಭೂಮಿ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಬದುಕು ಸಾಗಿಸುತ್ತಿರುವ ದುರ್ಬಲ ವರ್ಗದವರಿಗೆ 94 ಸಿ ನಿಯಮಾವಳಿಯಂತೆ ಅರ್ಜಿ ಸಲ್ಲಿಸಿ ಅಕ್ರಮವನ್ನು ಸಕ್ರಮ ಮಾಡಿಕೊಳ್ಳುವ ಸಮಯಾವಕಾಶವನ್ನು 2016ರ ನವೆಂಬರ್ ಅಂತ್ಯದವರೆಗೆ ಸಚಿವರು ವಿಸ್ತರಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಬಗ್ಗೆ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸಲು ಆಂದೋಲನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಕೊಡಗು ಜಿಲ್ಲೆಯ 103 ಗ್ರಾಮ ಪಂ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ ಕೆಲವು ಕಡೆ ಅತಿವೃಷ್ಟಿಯಾಗಿದೆ ಮತ್ತೆ ಕೆಲವೆಡೆ ಅನಾವೃಷ್ಟಿಯಾಗಿದೆ. ಇದರಿಂದ ಸಾಕಷ್ಟು ಕಷ್ಟ, ನಷ್ಟಗಳಾಗಿದ್ದು, ಜಿಲ್ಲೆಯ ಬೆಳೆೆಗಾರರಿಗೆ ಹಾಗೂ ಕೃಷಿಕರಿಗೆ ಸರಕಾರದಿಂದ ಹೆಚ್ಚಿನ ಪರಿಹಾರವನ್ನು ಕಲ್ಪಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳಲು ಸಭೆ ತೀರ್ಮಾನ ಕೈಗೊಂಡಿತು.
ಭಾಗಮಂಡಲದಲ್ಲಿ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವ ಸಂದರ್ಭ ಜನ ಸಂಪರ್ಕ ಕಡಿತಗೊಳ್ಳುವುದನ್ನು ತಪ್ಪಿಸಲು ಸರಕಾರ ಮೇಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವುದನ್ನು ಸಭೆೆ ಸ್ವಾಗತಿಸಿತು. ಪಡಿತರ ಚೀಟಿಗೆ ಈಗ ವಿತರಿಸುತ್ತಿರುವ2 ಲೀಟರ್ ಸೀಮೆ ಎಣ್ಣೆಗೆ ಮತ್ತೊಂದುಲೀಟರ್ ಸೀಮೆ ಎಣ್ಣೆಯನ್ನು ಹೆಚ್ಚುವರಿ ನೀಡುವ ಮೂಲಕ 3 ಲೀಟರ್ ಸೀಮೆಎಣ್ಣೆ ಗ್ರಾಹಕರಿಗೆ ದೊರೆಯುತ್ತಿದ್ದು, ಇದು ಕಾಂಗ್ರೆಸ್ ಪ್ರಯತ್ನಕ್ಕೆ ಸಿಕ್ಕಿದ ಫಲವೆಂದು ಸಭೆ ಅಭಿಪ್ರಾಯಪಟ್ಟಿತು.
ಸಭೆಯಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್, ಪದಾಧಿಕಾರಿಗಳಾದ ಪಿ.ಕೆ. ಪೊನ್ನಪ್ಪ, ಉಸ್ಮಾನ್ ಹಾಜಿ, ವಿ.ಪಿ. ಸುರೇಶ್, ಎಸ್.ಎಂ. ಚಂಗಪ್ಪ, ಎಂ.ಎಸ್. ವೆಂಕಟೇಶ್, ಟಿ.ಎಂ. ಅಯ್ಯಪ್ಪ, ನಟೇಶ್ ಗೌಡ, ಕೆ.ಕೆ. ಮಂಜುನಾಥ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







