ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲು ರೈತರ ನಿರ್ಧಾರ
ಮಿತಿ ಮೀರಿದ ಕಾಡಾನೆ ಹಾವಳಿ, ಕ್ರಮ ಕೆಗೊಳ್ಳದ ಅರಣ್ಯ ಇಲಾಖೆ

ಮಡಿಕೇರಿ, ಸೆ.24: ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಯ ಗಾಂಭೀರ್ಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಜಿಲ್ಲೆಯ ಬೆಳೆಗಾರರು ಹಾಗೂ ರೈತರು ಮುಂದಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ, ಕಾಡಾನೆ ಹಾವಳಿ ಕುರಿತು ಚರ್ಚಿಸಲು ಮತ್ತು ಶಾಶ್ವತ ಪರಿಹಾರಕ್ಕಾಗಿ ಸರಕಾರಗಳನ್ನು ಒತ್ತಾಯಿಸಲು ಸೆ.29 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಇತ್ತೀಚೆಗೆ ರೈತ ಸಂಘದ ಮೂಲಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿಯಾಗಿ ಕಾಡಾನೆ ಹಾವಳಿ ತಡೆಗೆ ಮನವಿ ಮಾಡಿದೆೆೆ. ಆದರೆ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದ ಅರಣ್ಯ ಅಧಿಕಾರಿಗಳು, ಶಾಶ್ವತ ಯೋಜನೆಗೆ 400 ಕೋ ರೂ. ಅಗತ್ಯವಿದೆಯೆಂದು ತಿಳಿಸಿದ್ದಾರೆ. ಸರಕಾರ ಕೇವಲ 50 ಕೋ ರೂ. ನೀಡಲು ಸಿದ್ಧವಿದ್ದು, ಹೆಚ್ಚಿನ ಅನುದಾನ ಬಿಡುಗಡೆಗಾಗಿ ಪೂರ್ವಭಾವಿ ಸಭೆಯಲ್ಲಿ ಒತ್ತಾಯಿಸಲಾಗುವುದೆಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಕಾಡಾನೆಗಳು ನೆಲೆಸಿದ್ದು, ಕಾಫಿ ತೋಟಗಳಲ್ಲೇ ಮರಿ ಹಾಕಿ ಬೀಡು ಬಿಡುತ್ತಿರುವ ಬೆಳವಣಿಗೆಗಳು ಸಾಮಾನ್ಯವಾಗಿದೆ.
ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಈ ಸಮಸ್ಯೆಯ ಗಾಂಭೀರ್ಯತೆಯನ್ನು ಮನವರಿಕೆ ಮಾಡಿಕೊಡುವ ಅನಿವಾರ್ಯತೆ ಎದುರಾಗಿದ್ದು, ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಬೆಳೆಗಾರರು, ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾಡಾನೆ ಹಾವಳಿ ಪೀಡಿತ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದರು.
ಅ.28 ರಂದು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಹತ್ವದ ಸಭೆಯೊಂದನ್ನು ನಡೆಸಿ ಅಂತಿಮ ನಿರ್ಣಯ ಕೈಗೊಂಡು ಶಾಶ್ವತ ಪರಿಹಾರಕ್ಕಾಗಿ ಸರಕಾರಗಳ ಮೇಲೆ ಒತ್ತಡ ಹೇರಲಾಗುವುದೆಂದು ಕೆ.ಯು. ಗಣಪತಿ ತಿಳಿಸಿದರು,
ಸಂಚಾಲಕ ಕೇಚಂಡ ಕುಶಾಲಪ್ಪಮಾತನಾಡಿ, ಜಿಲ್ಲೆಯ ವೀರಾಜಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆಯಾದರೂ ಇಲ್ಲಿಯವರೆಗೆ ಬರಪರಿಹಾರದ ಅನುದಾನ ಬಿಡುಗಡೆಯಾಗಿಲ್ಲ ವೆಂದು ಆರೋಪಿಸಿದರು.
ಈ ಅನುದಾನ ಬಿಡುಗಡೆಯಾಗಿದ್ದರೆ ಮುಂದಿನ15 ದಿನಗಳ ಒಳಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಎಂ.ಸಿ. ವಿಜಯ ಉಪಸ್ಥಿತರಿದ್ದರು.







