ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷರ ಆಗ್ರಹ
ಸುಳ್ಯ ಇಸ್ಮಾಯೀಲ್ ಹತ್ಯೆ ಪ್ರಕರಣ
ಮಂಗಳೂರು,ಸೆ.24:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತರ ಘಟಕದ ಕರಾವಳಿ ವಿಭಾಗದ ಅಧ್ಯಕ್ಷ ಇಸ್ಮಾಯೀಲ್ ನೇಲ್ಯಮಜಲು ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ರಾಜ್ಯ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ವೈ.ಸಯೀದ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅವರು ಇಂದು ಮೃತ ಇಸ್ಮಾಯೀಲ್‌ರವರ ಸುಳ್ಯದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಸಮಾಲೋಚನೆ ನಡೆಸಲಾಗಿದೆ.ಇಸ್ಮಾಯೀಲ್‌ರವರು ಮಸೀದಿಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ.ಈ ರೀತಿಯ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇಸ್ಮಾಯೀಲ್‌ರವರ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.ಇಸ್ಮಾಯೀಲ್‌ರವರ ಹತ್ಯೆಯ ಹಿಂದೆ ಯಾವ ಉದ್ದೇಶ ಇದೆ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಜೊತೆ ಚರ್ಚಿಸಲಾಗಿದೆ ಎಂದು ಅಹಮ್ಮದ್ ತಿಳಿಸಿದರು.
ಸೌರ್ಹಾದತೆ ಕಾಪಾಡಲು ರಾಜ್ಯಮಟ್ಟದ ಸಮಾವೇಶ :-ಸೌರ್ಹಾದತೆ ಕಾಪಾಡಲು ಮುಂದಿನ ಏಳು ತಿಂಗಳ ಒಳಗಾಗಿ ರಾಜ್ಯ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು.ಅದಕ್ಕಿಂತ ಮುಂಚಿತವಾಗಿ ಜಿಲ್ಲಾ ಮಟ್ಟದ ಹಾಗೂ ವಿಭಾಗ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಅಕ್ಟೋಬರ್ ತಿಂಗಳ ಎರಡನೆ ವಾರದಲ್ಲಿ ದ.ಕ ಜಿಲ್ಲಾ ಅಲ್ಪ ಸಂಖ್ಯಾತರ ಸಮಾವೇಶ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.ನವೆಂಬರ್ 15ರಂದು ದಿವಂತ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ವಿಭಾಗದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಹಮ್ಮದ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಮೇಳ: ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ಉದ್ಯೋಗ ಮೇಳವನ್ನು ಶೀಘ್ರದಲ್ಲಿ ದ.ಕ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ.ಈ ಹಿಂದೆ ರಾಜ್ಯದ ಇತರ ಕಡೆ ನಡೆಸಲಾದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರೀಯೆ ದೊರೆತಿದೆ.ಈ ಉದ್ಯೋಗ ಮೇಳದಲ್ಲಿ ಅಲ್ಪ ಸಂಖ್ಯಾತರಲ್ಲದೆ ಇತರರು ಭಾಗವಹಿಸಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಅಹಮ್ಮದ್ ತಿಳಿಸಿದ್ದಾರೆ.ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಲ್ಲಿ ಮುಸ್ಲಿಂ,ಕ್ರಿಶ್ಚಿಯನ್ ,ಸಿಕ್,ಬೌದ್ಧ,ಪಾರ್ಸಿ,ಜೈನ ಧರ್ಮದವರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಅವರಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸರಕಾರ ದ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಅಹಮ್ಮದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಬ್ರಿಜೇಶ್ ,ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಎಸ್.ಕರೀಂ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು,ಹಾಗೂ ಸಮಿತಿಯ ಮುಖಂಡರಾದ ಮೆಲ್ವಿನ್ ಪಿಂಟೋ,ಫಾರೂಕ್ ತುಂಬೆ,ನೂರುದ್ದೀನ್ ಸಾಲ್ಮರ,ಸಲೀಂ ಉಳ್ಳಾಲ,ಸಮದ್ ಮೊದಲಾದವರು ಉಪಸ್ಥಿತರಿದ್ದರು.







