ಕ್ರೀಡೆಗೆ ಅಗತ್ಯ ಪ್ರೋತ್ಸಾಹ ನೀಡುವಲ್ಲಿ ಕೇಂದ್ರ ಸರಕಾರ ವಿಫಲ: ಶಾಸಕ ಬಿ.ಬಿ.ನಿಂಗಯ್ಯ
ಜಿಲ್ಲಾಮಟ್ಟದ ಕ್ರೀಡಾಕೂಟ

ಮೂಡಿಗೆರೆ, ಸೆ.24: ಕ್ರೀಡೆಗೆ ಅಗತ್ಯ ಪ್ರೋತ್ಸಾಹ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆೆ. ಇದರಿಂದಾಗಿ ಒಲಿಪಿಂಕ್ ಸೇರಿದಂತೆ ಯಾವುದೆ ಪ್ರಮುಖ ಕ್ರೀಡೆಯಲ್ಲಿ ದೇಶದ ಸಾಧನೆ ಹಿನ್ನಡೆಯಾಗಲು ಕಾರಣವಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.
ಅವರು ಶನಿವಾರ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಶ್ರಯದಲ್ಲಿ ನಳಂದ ಅಂಗ್ಲ ಮಾಧ್ಯಮ ಶಾಲಾ ಅವರಣದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದೃಢ ಸಂಕಲ್ಪ, ನಿರಂತರ ಪ್ರಯತ್ನ ಮತ್ತು ಶ್ರದ್ಧೆಯಿಂದ ಭಾಗವಹಿಸಿದಲ್ಲಿ ಗೆಲ್ಲುವುದು ಸಾಧ್ಯ. ಶಿಕ್ಷಕರು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸಹಕರಿಸಿ ಎಂದು ತಿಳಿಸಿದರು.
ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಗೆದ್ದ ನಂತರ ಸರಕಾರ ಹಣ ನೀಡಿ ಸನ್ಮಾನ ಮಾಡುವ ಬದಲು ಪ್ರಾರಂಭದ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ, ಸಲಹೆ, ಸಹಕಾರ ಮತ್ತು ಆರ್ಥಿಕ ಸಹಾಯ ನೀಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಕರು ಶಿಸ್ತು ಮತ್ತು ಶ್ರಮವನ್ನು ವಿದ್ಯಾರ್ಥಿಗಳ ಮೇಲೆ ಹೇರಿದಲ್ಲಿ ಪ್ರತಿಭೆ ತಾನಾಗಿಯೆ ಹೊರಬರಲು ಸಾಧ್ಯ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾಲತೇಶ್ ಮಾತನಾಡಿ, ನಿಮ್ಮ ಪ್ರತಿಭೆ ಅನಾವರಣಗೊಳಿಸುವಂತ ವೇದಿಕೆ ಇದಾಗಿದೆ. ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆ ಕೂಡ ಪ್ರಮುಖವಾಗಿದೆ. ಹೆಣ್ಣು ಮಕ್ಕಳನ್ನು ಕ್ರೀಡೆಯಿಂದ ಹೊರಗಿಡಬಾರದು. ಪೋಷಕರು ಹೆಣ್ಣು ಗಂಡು ಎಂಬ ಭೇದ ಭಾವ ಮಾಡದೇ ಸಮಾನರಾಗಿ ನೋಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಮೆಚೂರು ಕಬಡಿ ಅಸೋಶಿಯೇಶನ್ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯರಾದ ಶಾಮಣ್ಣ, ಸುಧಾ ಯೋಗೇಶ್, ತಾಪಂ ಸದಸ್ಯೆ ಭಾರತೀ ರವೀಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಶ್, ಪಪಂ ಸದಸ್ಯ ಮದೀಶ್, ದಾನಿಗಳಾದ ಡೇನಿಯಲ್ ಸಲ್ಡಾನ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್, ನಳಂದ ವಿದ್ಯಾ ಸಂಸ್ಥೆಯ ಕೃಷ್ಣೇಗೌಡ, ಪುಟ್ಟಪ್ಪ, ಷಡಕ್ಷರಿ, ಪರಮೇಶ್, ತಿಮ್ಮಪ್ಪ, ಪುಟ್ಟರಾಜು, ಹೊನ್ನಯ್ಯ, ಶ್ರೀನಿವಾಸ್ ವೀಣಾ, ಸುರೇಶ್ ಗೌಡ, ವೇಣಿ ಮತ್ತಿತರರು ಉಪಸ್ಥಿತರಿದ್ದರು.







