ಉತ್ತಮ ಆಹಾರ ಸೇವನೆಯಿಂದ ರಕ್ತಹೀನತೆ ತಡೆಗಟ್ಟಬಹುದು:ಡಾ. ಎನ್.ಮುರುಳೀಧರ್
ರಕ್ತದಾನ ಶಿಬಿರ

ಚಿಕ್ಕಮಗಳೂರು, ಸೆ.24: ಸ್ವಚ್ಛ ಪರಿಸರ, ನಿಯಮಿತ ವ್ಯಾಯಾಮ, ಒಳ್ಳೆಯ ಹವ್ಯಾಸ ಮತ್ತು ಉತ್ತಮ ಆಹಾರ ಸೇವನೆಯಿಂದ ರಕ್ತಹೀನತೆಯಿಂದ ಮುಕ್ತರಾಗಬಹುದೆಂದು ಜಿಲ್ಲಾಸ್ಪತ್ರೆ ರಕ್ತನಿಧಿ ಮುಖ್ಯಸ್ಥ ಡಾ. ಎನ್.ಮುರುಳೀಧರ್ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಐಡಿಎಸ್‌ಜಿ ಸರಕಾರಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವಕರು ರಕ್ತದಾನದ ಮಹತ್ವ ಅರಿತು ನಿಯಮಿತವಾಗಿ ರಕ್ತ ನೀಡಿದರೆ ಇನ್ನೊಬ್ಬರಿಗೆ ಅನುಕೂಲವಾಗುವುದರ ಜೊತೆಗೆ ತಮ್ಮ ರಕ್ತ ಪರೀಕ್ಷೆಗೊಳಪಡುವುದರಿಂದ ಅರಿವಿಲ್ಲದ ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲಿ ಅರಿತು ಮುಂದಿನ ದೊಡ್ಡ ಅನಾಹುತದಿಂದ ಪಾರಾಗಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಝರೀನಾ ಕೌಸರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ನದಾನ ಹಸಿವು ನೀಗಿಸಿದರೆ, ವಿದ್ಯಾದಾನ ವ್ಯಕ್ತಿತ್ವ ರೂಪಿಸುತ್ತದೆ, ಆದರೆ ರಕ್ತದಾನ ಜೀವವನ್ನು ಕಾಪಾಡುತ್ತದೆ ಎಂದರು.
ಹಣ್ಣು ಹಂಪಲು, ಹಾಲು, ತರಕಾರಿ, ಧಾನ್ಯ ಎಲ್ಲವೂ ಇಂದು ರಾಸಾಯನಿಕಗಳಿಂದ ಕೂಡಿದ್ದು, ದೇಹಕ್ಕೆ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತಿವೆ. ಸಾಧ್ಯವಾದಷ್ಟು ಸಾವಯವ ಉತ್ಪಾದನೆಗಳನ್ನು ಬಳಸುವುದು ಒಳಿತು ಎಂದರು.
ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶಪ್ಪ ಮತ್ತು ಸಿಡಿಸಿ ಸದಸ್ಯ ಕೆ.ಎಂ. ಕೃಷ್ಣಮೂರ್ತಿ ರಕ್ತದಾನದ ಮಹತ್ವ ವಿವರಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ. ಎಸ್.ಜಿ.ಕಿರಣ್ ಪ್ರಥಮ ಚಿಕಿತ್ಸೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಲಯನ್ಸ್ ಉಪ ರಾಜ್ಯಪಾಲ ಹರೀಶ್, ಮಾಜಿ ಅಧ್ಯಕ್ಷ ಎಂ.ಆರ್.ನಾಗರಾಜ್, ಪ್ರೊ. ಜಗದೀಶಪ್ಪ, ಕಾರ್ಯದರ್ಶಿ ಲೇಖಾ, ಲಯನೆಸ್ ಅಧ್ಯಕ್ಷೆ ರಮಾ ಜ್ಯೋತಿ ಪ್ರಕಾಶ್, ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಜಗದೀಶ್, ಕನ್ನಡ ಸ್ನಾತಕೋತ್ತರ ವಿಭಾಗದ ಸಮನ್ವಯಾಧಿಕಾರಿ ಪ್ರೊ. ಎಚ್.ಎಂ.ಮಹೇಶ್, ವ್ಯವಸ್ಥಾಪಕ ಆನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಮನ್ವಯಾಧಿಕಾರಿ ಪ್ರೊ. ಯು.ಕೆ.ಬಸವರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಸಿದರು. ಸಂದೇಶ್ ವಂದಿಸಿದರು.







