ಶಿವಮೊಗ್ಗದ ಚಂದ್ರಶೇಖರ್‌ಗೆ ‘ಮುತ್ತಿನಮ್ಮ ಶ್ರೀ ಪ್ರಶಸ್ತಿ’
ವಿಭಾಗ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಚಿಕ್ಕಮಗಳೂರು, ಸೆ.24: ಗಣೇಶೋತ್ಸವದ ಅಂಗವಾಗಿ ನಗರದ ಶಂಕರಪುರದಲ್ಲಿ ಶ್ರೀ ಮುತ್ತಿನಮ್ಮ ಗಣಪತಿ ಸೇವಾ ಸಮಿತಿ ವತಿಯಿಂದ ನಡೆದ ವಿಭಾಗ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಎಲ್ಲ ವಿಭಾಗಗಳಲ್ಲೂ ಗೆಲುವು ಸಾಧಿಸುವ ಮೂಲಕ ಶಿವಮೊಗ್ಗದ ಚಂದ್ರಶೇಖರ್ ಮುತ್ತಿನಮ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ದೇಹದಾರ್ಡ್ಯ ಪ್ರದರ್ಶನ ನೀಡುವ ಮೂಲಕ ಹಾಸನದ ದರ್ಶನ್ ಬೆಸ್ಟ್ ಪೋಸರ್ ಹಾಗೂ ಶಿವಮೊಗ್ಗದ ಡ್ಯಾನಿ ಡೇವಿಡ್ ಮತ್ತು ಬೀರೂರಿನ ಎಸ್.ಎನ್.ರಾಜು ಮೋಸ್ಟ್ ಮಸ್ಕಲರ್ ಪ್ರಶಸ್ತಿಗೆ ಪಾತ್ರರಾದರು.
ಸ್ಪರ್ಧೆಯ ನಂತರ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ನಗರಸಭೆ ಸದಸ್ಯ ಸಿ.ಕೆ.ಜಗದೀಶ್ ವಿಜೇತರಿಗೆ ಬಹುಮಾನ ವಿತರಿಸಿದರು.
ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳ 56 ದೇಹದಾರ್ಡ್ಯ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಸಂಚಲನ ಮೂಡಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಶ್ರೀ ಮುತ್ತಿನಮ್ಮ ಗಣಪತಿ ಸೇವಾಸಮಿತಿ ಅಧ್ಯಕ್ಷ ಪಿ.ಮಧು, ಉಪಾಧ್ಯಕ್ಷ ಭರಣಿ, ಕಾರ್ಯದರ್ಶಿ ಮೋಹನ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಅರುಣ್ ಕುಮಾರ್, ಸತೀಶ್, ಖಜಾಂಚಿ ದುರ್ಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





