ವೈದಿಕ ಪರಂಪರೆಯಿಂದ ವೈಚಾರಿಕ ಚಿಂತನೆಗಳು ಕಣ್ಮರೆ: ನಿಜಗುಣಾನಂದ ಶ್ರೀ
ದಲಿತೋತ್ಸವ-2016

ದಾವಣಗೆರೆ, ಸೆ.24: ದೇವರು ಧರ್ಮದ ಹೆಸರಿನಲ್ಲಿ ಭಾರತೀಯರನ್ನು ಒಡೆಯುವ ಕೆಲಸ ಮಾಡಲಾಗುತ್ತದೆ. ದೇವರುಗಳಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ. ಧಾರ್ಮಿಕರ ಮುಖಂಡರೇ ಮುಗ್ಧ ಜನಸಾಮಾನ್ಯರಿಗೆ ಮೋಸ ಮಾಡಬೇಡಿ. ವೈದಿಕ ಪರಂಪರೆ ಮೂಲಕ ವೈಚಾರಿಕ ಚಿಂತನೆಗಳು ಕಣ್ಮರೆಯಾಗುತ್ತಿವೆ ಎಂದು ಬೇಲೂರು ಮುಂಡರಗಿ ಶ್ರೀ ನಿಜಗುಣಾನಂದ ಶ್ರೀಗಳು ಹೇಳಿದರು. ನಗರದ ಬಾಪೂಜಿ ಸಮುದಾಯ ಭವನದಲ್ಲಿ ಶನಿವಾರ ಸಾವಿತ್ರಿ ಬಾಯಿ ಫುಲೆ ವೇದಿಕೆಯಲ್ಲಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ವತಿಯಿಂದ ‘ದಲಿತೋತ್ಸವ 2016’ರನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮ, ದೇವರ ನಡುವೆ ಗೊಂದಲವಿದೆ. ಯಾವುದು ದೇವರು, ಯಾವುದು ಧರ್ಮ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್ ಅನುಸರಿಸಿದ್ದ ಧರ್ಮದ ಸಿದ್ದಾಂತಗಳನ್ನು ಅರಿತು ಪಾಲಿಸುವುದು ಸೂಕ್ತ. ಹಾಗೆಯೇ ವಿದ್ಯಾರ್ಥಿಗಳು ಕೈಯಲ್ಲಿ ಲಾಠಿ ಹಿಡಿಯುವ ಬದಲು ಪೆನ್ನು ಹಿಡಿದು ಬದಲಾವಣೆಗೆ ಪ್ರಯತ್ನ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕಗಳನ್ನು ಓದಿಕೊಳ್ಳುವ ಮೂಲಕ ಅವರ ಆದರ್ಶ, ಚಿಂತನೆ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಮುಂದಾಗ ಬೇಕು. ಪ್ರಸ್ತುತ ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ದಲಿತರು ತಮ್ಮ ಊರುಗಳು ಮತ್ತು ಸಮಾಜದವರ ಅಭಿವೃದ್ಧಿಗೆ ಶ್ರಮಿಸಬೇಕು.
ನಮ್ಮ ದೇಶದಲ್ಲಿ ಜಾತ್ಯತೀತ ಸೋಗಿನಲ್ಲಿ ಮತ್ತು ಧರ್ಮದ ಸೋಗಿನಲ್ಲಿ ಎರಡು ಪಕ್ಷಗಳಿವೆ. ಅವುಗಳನ್ನು ಬಹಳ ಎಚ್ಚರಿಕೆಯಿಂದ ನೋಡಬೇಕಾಗಿದೆ ಎಂದ ಅವರು, ಈ ಮಾನವ ಬಂಧುತ್ವ ವೇದಿಕೆ ಹಿಂದುಗಳ ಮತ್ತು ಮುಸ್ಲಿಮರ ಪರವು ಅಲ್ಲ ವಿರೋಧವು ಅಲ್ಲ. ಮನುಷ್ಯತ್ವದ ಪರ ಕೆಲಸ ಮಾಡುತ್ತದೆ ಎಂದು ನುಡಿದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಭಯೋತ್ಪಾದಕರು ದೇಶದ ಗಡಿಯಾಚೆಯಷ್ಟೇ ಅಲ್ಲದೆ ಪ್ರಸ್ತುತ ಟಿವಿ ಮಾಧ್ಯಮಗಳು ಭಯೋತ್ಪಾದಕರ ರೀತಿಯಲ್ಲಿ ಜನರಿಗೆ ವಂಚನೆ ಮೋಸ ಮಾಡುತ್ತಿವೆ ಎಂದು ಹರಿಹಾಯ್ದರು.
ಹಿಂದು ಧರ್ಮ ರಕ್ಷಣೆ ಎಂದರೆ ರಾಷ್ಟ್ರರಕ್ಷಣೆಯಲ್ಲ. ರಾಷ್ಟ್ರ ಎಂದರೆ ಜನ ಎಂಬುದನ್ನು ಅರಿಯಬೇಕು. ಪ್ರತಿದಿನ ಜ್ಯೋತಿಷ್ಯ ಹೇಳುವವರೂ ಭಯೋತ್ಪಾದಕರಿಗಿಂತ ಹೊರತಲ್ಲ ಎಂದ ಅವರು, ಧರ್ಮ ಎಂದರೆ ಮನುಷ್ಯ ಮನುಷ್ಯನನ್ನು ಪ್ರೀತಿಸುವುದು. ಕಾಣದ ದೇವರನ್ನು ಪ್ರೀತಿಸುವ ಇವರು ಎದುರಿಗೆ ಕಾಣುವ ಮನುಷ್ಯನನ್ನು ಯಾಕೆ ಪ್ರೀತಿಸುವುದಿಲ್ಲ ಎಂದು ಪ್ರಶ್ನಿಸಿದರು.
ಬುದ್ದ, ಬಸವಣ್ಣ, ಅಂಬೇಡ್ಕರ್ ಕೂಡ ಇಂತಹ ವಿತಂಡವಾದಿಗಳ ವಿರುದ್ಧ ಹೋರಾಟ ಮಾಡಿದವರು. ಅಂಬೇಡ್ಕರ್ ಸ್ವಾರ್ಥ ಬಯಸಿದ್ದರೆ ಅಂತಾರಾಷ್ಟ್ರೀಯ ವಿವಿಗಳಲ್ಲಿ ಕುಲಪತಿಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಅವರು ತನ್ನ ಸಮುದಾಯಕ್ಕಾಗಿ ಹೋರಾಟ ಮಾಡಿ ಈ ದೇಶಕ್ಕೆ ಸಂವಿಧಾನ ನೀಡಿದ್ದಾರೆ ಎಂದು ನುಡಿದರು.
ದಲಿತರಿಗೆ ಮೊದಲು ಶಿಕ್ಷಣ ನೀಡಿದವರು ಜ್ಯೋತಿ ಬಾ ಪುಲೆ ಮತ್ತು ಅವರ ಪತ್ನಿ ಸಾವಿತ್ರಿ ಬಾಯಿಪುಲೆ ಎಂಬುದನ್ನು ನಾವು ಮರೆಯಬಾರದು. ಅವರ ಹೆಸರಿನಲ್ಲಿ ಇಂದು ವೇದಿಕೆ ನಿರ್ಮಾಣ ಮಾಡಿರುವುದು ಸಂತೋಷದ ವಿಷಯ ಎಂದರು. ಈ ಸಂದರ್ಭ 2016ರ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಬಿ. ಕೃಷ್ಣಪ್ಪಪ್ರಶಸ್ತಿ ಮಾವಳ್ಳಿ ಶಂಕರ್, ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಸಂಘ, ಸಪ್ಕರ್ ಹಶ್ಮಿ ಜನ ಸಂಸ್ಕೃತಿ ಪ್ರಶಸ್ತಿ ಡಾ.ಸಿದ್ದನಗೌಡ ಪಾಟೀಲ್, ಪೆರಿಯಾದ ರಾಮಸ್ವಾಮಿ ನಾಯಕರ್ ಪ್ರಶಸ್ತಿ ಕಲ್ಲೆ ಶಿವೋತ್ತಮ ರಾವ್, ಮಾನವ ಬಂಧುತ್ವ ಪ್ರಶಸ್ತಿ ವಿಶ್ವಾರಾಧ್ಯ ಸತ್ಯಂಪೇಟೆ ಅವರಿಗೆ ನೀಡಿ ಗ್ವರವಿಸಲಾಯಿತು.
ಡಾ. ಅರವಿಂದ ಮಾಲಗತ್ತಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಳವಳ್ಳಿ ಶಂಕರ್, ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಮುಖಂಡ ಡಾ. ಸಿದ್ದನಗೌಡ ಪಾಟೀಲ್, ವಿಶ್ವರಾಧ್ಯ ಸತ್ಯಂಪೇಟೆ, ಪ್ರೊ. ರಾಮಚಂದ್ರಪ್ಪ, ಸಂಚಾಲಕ ಡಿಸೋಜಾ, ಅನಂತ್ ನಾಯ್ಕೊ, ರಾಘುದೊಡ್ಮನಿ ಉಪಸ್ಥಿತರಿದ್ದರು.







