ನಾನು ಮತಾಂತರವಾಗಿಲ್ಲ: ದೀಕ್ಷಿತ್ ಗೌಡ ಸ್ಪಷ್ಟನೆ

ಸುಳ್ಯ, ಸೆ.24: ‘ನಾನು ಮತಾಂತರ ಆಗಿಲ್ಲ. ಮತಾಂತರಗೊಂಡಿದ್ದೇನೆ ಎಂಬುದೆಲ್ಲಾ ಸುಳ್ಳು ಸುದ್ದಿ’.
ಇದು ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾದ ‘ಮತಾಂತರ’ದ ಆರೋಪ-ಗುಲ್ಲಿಗೆ ಸಂಬಂಧಿಸಿ ಸುಳ್ಯದ ಅರಂಬೂರಿನ ದೀಕ್ಷಿತ್ ಗೌಡ ನೀಡಿದ ಸ್ಪಷ್ಟನೆ.
ಎರಡು ವಾರದ ಹಿಂದೆ ತಂದೆ ಹೊಡೆದರೆಂದು ಮನೆಬಿಟ್ಟು ಹೋಗಿದ್ದ ದೀಕ್ಷಿತ್ ಗೌಡ ಶುಕ್ರವಾರ ಅರಂಬೂರಿನ ತನ್ನ ಮನೆಗೆ ಬಂದ ಬಗ್ಗೆ ಮಾಹಿತಿ ಪಡೆದ ಪತ್ರಕರ್ತರು ದೀಕ್ಷಿತ್ ಗೌಡನ ಮನೆಗೆ ಭೇಟಿ ನೀಡಿ ‘ಮತಾಂತರ’ದ ಕುರಿತಂತೆ ಮಾತನಾಡಿಸಿದಾಗ, ‘ನಾನು ಮನೆಯಲ್ಲಿ ಬೆಳಗ್ಗೆ ಯೋಗ ಮಾಡುತ್ತಿದ್ದೆ. ನನಗೂ ಮತ್ತು ನನ್ನ ತಂದೆಗೂ ಸಣ್ಣ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಅವರು ನನಗೆ ಹೊಡೆದರು. ಬೇಸರಗೊಂಡ ನಾನು ಮನೆಯಿಂದಲೇ 4 ಸಾವಿರ ರೂ. ತೆಗೆದುಕೊಂಡು ನಾನು ವ್ಯಾಸಂಗ ಮಾಡುತ್ತಿರುವ ಕೇರಳದ ಕಲ್ಲಿಕೋಟೆಗೆ ಹೋದೆ. ಅಲ್ಲಿ ಎರಡು ದಿನ ಇದ್ದು ಬಳಿಕ ಬೆಂಗಳೂರಿಗೆ ಬಂದು ಸ್ನೇಹಿತರ ಜತೆ ಜಯನಗರದಲ್ಲಿ ಕೆಲಸಕ್ಕೆ ಸೇರಿದೆ. ಹೀಗಿರುವಾಗ ‘ನಾನು ಮತಾಂತರ’ಗೊಂಡಿದ್ದೇನೆ ಎಂಬ ವಿಚಾರದ ಬಗ್ಗೆ ಇಲ್ಲೆಲ್ಲಾ ಸುಳ್ಳು ಸುದ್ದಿ ಹಬ್ಬಿರುವುದು ನನ್ನ ಗಮನಕ್ಕೆ ಬಂತು. ಪತ್ರಿಕೆಗಳಲ್ಲೂ ಸುದ್ದಿ ಓದಿದೆ. ನಾನು ಮನೆಬಿಟ್ಟು ಹೋದ ಬಳಿಕ ಎರಡು ದಿನಕ್ಕೊಮ್ಮೆ ತಾಯಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ಏನೂ ಅರಿಯದೆ ಸುಳ್ಳು ಸುದ್ದಿಯನ್ನು ಕೆಲವರು ಹಬ್ಬಿಸಿದ್ದು ಸರಿಯಲ್ಲ. ಇದೀಗ ನನ್ನ ಕೋರ್ಸ್ ಕಂಪ್ಲೀಟ್ ಆಗಿದೆ. ಸ್ವಲ್ಪದಿನ ಇಲ್ಲಿದ್ದು ಮತ್ತೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದರು. ‘ಮಗ ಮನೆ ಬಿಟ್ಟು ಹೋದ ಬಳಿಕ ನನಗೆ ಫೋನ್ ಮಾಡಿಲ್ಲ. ಪತ್ನಿಗೆ ಫೋನ್ ಮಾಡುತ್ತಿದ್ದ. ಇದರಿಂದ ಬೇಸರಗೊಂಡ ನಾನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಅಂದು ಕೋಪದಲ್ಲಿ ಆತನಿಗೆ ಹೊಡೆದದ್ದು ಹೌದು. ಆದರೆ ಆತ ಮತಾಂತರವಾಗಿಲ್ಲ’ ಎಂದು ದೀಕ್ಷಿತ್ ಗೌಡರ ತಂದೆ ಜನಾರ್ದನ ಗೌಡ ಹೇಳಿದರು.
ಸೆ.8ರಂದು ಮುಂಜಾನೆ ಮನೆಯಲ್ಲಿ ದೀಕ್ಷಿತ್ ಬೆಳಗ್ಗೆ ನಮಾಜ್ ಮಾಡುತ್ತಿದ್ದನೆಂಬ ಅನುಮಾನದಿಂದ ಜನಾರ್ದನ ಗೌಡ ಹೊಡೆದಿದ್ದರು. ಈ ಸಿಟ್ಟಿನಿಂದ ಆತ ಮನೆ ಬಿಟ್ಟು ಪರಾರಿಯಾಗಿದ್ದ. ಅಂದು ಸಂಜೆ ದೀಕ್ಷಿತ್ ನಾಪತ್ತೆಯಾಗಿದ್ದಾನೆಂದು ಜನಾರ್ದನ ಗೌಡರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆತನ ಪತ್ತೆಗಾಗಿ ಕೇರಳ ಹಾಗೂ ಬೆಂಗಳೂರಿಗೆ ಹೋಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ದೀಕ್ಷಿತ್ ಪತ್ತೆಯಾಗಿರಲಿಲ್ಲ. ಈ ಬಗ್ಗೆ ನಡೆದ ಸಭೆಯಲ್ಲೂ ದೀಕ್ಷಿತ್ ಮತಾಂತರದ ಕುರಿತು ಉಲ್ಲೇಖವಾಗಿತ್ತು. ಶುಕ್ರವಾರ ಆತ ಮನೆಗೆ ತಾನೇ ಬಂದು ಹೆತ್ತವರ ಜತೆ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ.







