ಮೂಡುಬಿದಿರೆಯಲ್ಲಿ 1000ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ

ಮೂಡುಬಿದಿರೆ,ಸೆ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಕಾರ್ಕಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಮಂಡಳಿ ಮೂಡಬಿದಿರೆ ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಮೂಡಬಿದಿರೆ ಮತ್ತು ಪುತ್ತಿಗೆ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯುವ 1000ನೇ ಮದ್ಯವರ್ಜನ ಶಿಬಿರಕ್ಕೆ ಶನಿವಾರ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ದೇಶದ ಗಮನಸೆಳೆದಿರುವ ಡಾ.ಡಿ ವೀರೇಂದ್ರ ಹೆಗ್ಗಡೆಯವರ ದೂರದೃಷ್ಠಿಯಿಂದ ಮದ್ಯವರ್ಜನ ಶಿಬಿರ ಸಾವಿರಾರು ಜನರಿಗೆ ಹೊಸ ಜೀವನ ನಡೆಸುವಂತಹ ಶಕ್ತಿಯನ್ನು ನೀಡಿದೆ ಎಂದರು.
ಕಾರ್ಯಾಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ಆಳ್ವಾಸ್ ಸಂಸ್ಥೆಯಲ್ಲಿ ಹಿಂದೆ 100ನೇ ಶಿಬಿರವನ್ನು ಆಯೋಜಿಸಲಾಗಿತ್ತು. ಮದ್ಯವರ್ಜನೆ ಶಿಬಿರ ಕುಡಿತದ ದಾಸ್ಯದಿಂದ ಬಿಡಿಸಿ,ಪೂಜ್ಯ ಖಾವಂದರ ಮಾರ್ಗದರ್ಶನ ನಡೆಯುವ ಮದ್ಯವರ್ಜನ ಶಿಬಿರ ಹಲವರ ಬದುಕಿನಲ್ಲಿ ಹೊಸಬೆಳಕು ಮೂಡಿಸುವಂತಹ ಶ್ರೇಷ್ಠ ಶಿಬಿರ ಎಂದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಕೆ.ಮಹಾವೀರ ಅಜ್ರಿ, ಚೌಟರ ಅರಮನೆಯ ಕುಲದೀಪ್, ಅವಿಭಜಿತ ದ.ಕ ಜಿಲ್ಲೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಕೃಷಿಕ ಸಮಾಜ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಜನಜಾಗೃತಿ ವೇದಿಕೆ ಮೂಡುಬಿದಿರೆ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಪುತ್ತಿಗೆ ವಲಯ ಅಧ್ಯಕ್ಷ ದಿನೇಶ್ ಆನಡ್ಕ, ಕಾರ್ಕಳ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಿ.ಪಾಂಡು, ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪೂಜಾರಿ, ಪುತ್ತಿಗೆ ವಲಯ ಅಧ್ಯಕ್ಷ ಎನ್. ಹೊನ್ನಪ್ಪ, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್, ವಿವಿಧ ಸಮಿತಿಯ ಪದಾಧಿಕಾರಿಗಳಾದ ದೇವಾದಾಸ್ ಹೆಬ್ಬಾರ್, ಕಮಲಾಕ್ಷ, ಪಿ.ಕೆ ಪುರುಷೋತ್ತಮ, ಹರಿಶ್ಚಂದ್ರ ತೆಂಡೂಲ್ಕರ್ ವೇದಿಕೆಯಲ್ಲಿದ್ದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಭಿರಾಧಿಕಾರಿ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ತಾಲೂಕು ಯೋಜನಾಧಿಕಾರಿ ಕೃಷ್ಣ ಟಿ. ವಂದಿಸಿದರು.







