ಆಳ್ವಾಸ್‌ನಲ್ಲಿ ಚಲನಚಿತ್ರೋತ್ಸವಕ್ಕೆ ಚಾಲನೆ
ಮೌಲ್ಯಭರಿತ ಚಲನಚಿತ್ರಗಳಿಂದ ಪರಿವರ್ತನೆ ಸಾಧ್ಯ : ಅಭಯಚಂದ್ರ

ಮೂಡುಬಿದಿರೆ,ಸೆ.24: ದಾರಾವಾಹಿಗಳ ಭರಾಟೆಯಿಂದ ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಮೌಲ್ಯಭರಿತ ಚಲನ ಚಿತ್ರಗಳು ವಿದ್ಯಾರ್ಥಿಗಳಲ್ಲಿ ಮೌಲ್ಯದ ಜೊತೆ ಪರಿವರ್ತನೆಯನ್ನು ಉಂಟು ಮಾಡುತ್ತದೆ ಎಂದು ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮುಂಬೈ ಇಂಟರ್‌ನ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಆಯ್ಕೆಯಾದ ಪ್ರಮುಖ ಚಲನಚಿತ್ರಗಳ ಹಾಗೂ ಪ್ರಾದೇಶಿಕ ಚಿತ್ರಗಳ ಪ್ರದರ್ಶನ-ಚಲನಚಿತ್ರೋತ್ಸವಕ್ಕೆ ವಿದ್ಯಾಗಿರಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನೈಜ್ಯ ಅಭಿನಯದ ಉತ್ತಮ ಸಂದೇಶ ನೀಡುವ ಚಲನಚಿತ್ರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಮನರಂಜನೆ ನೀಡಬಹುದು. ಉತ್ತಮ ಸಿನಿಮಾಗಳ ಮೂಲಕ ಯುವಜನರನ್ನು ಸುಶಿಕ್ಷಿತರನ್ನಾಗಿಸುತ್ತದೆ. ಪರಿಣಾಮಕಾರಿ ಮಾಧ್ಯಮವಾದ ಚಲನಚಿತ್ರದಲ್ಲಿ ವೈಭವೀಕರಣದ ಸಿನಿಮಾದಲ್ಲಿ ನೈಜ್ಯ ನಟನೆಯಿರುವುದಿಲ್ಲ. ನೈಜ್ಯ ಅಭಿನಯ, ವಾಸ್ತವ ಬದುಕಿಗೆ ಹತ್ತಿರವಾಗುವ ಸಿನಿಮಾಗಳಿಂದ ನಾವು ಮೌಲ್ಯಯುತ ಸಂದೇಶವನ್ನು ನಿರೀಕ್ಷಿಸಬಹುದು ಎಂದರು. ಸಾಕ್ಷ್ಯಚಿತ್ರ ನಿರ್ದೇಶಕಿ ಸರಸ್ವತಿ ಸಾಲ್ಯಾನ್ ಎರ್ಮಾಳ್, ಬೆಂಗಳೂರು ಫಿಲಂ ಡಿವಿಷನ್‌ನ ಉಪನಿರ್ದೇಶಕ ವಿ.ಎಸ್ ನಾಗರಾಜನ್ ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ವೇದಿಕೆಯಲ್ಲಿದ್ದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಸ್ವಾಗತಿಸಿದರು. ಆಳ್ವಾಸ್ ಪತ್ರಿಕೋದ್ಯಮದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ಕಾರ್ಯಕ್ರಮ ನಿರೂಪಿಸಿದರು. ಬೆಂಗಳೂರು ಫಿಲಂ ಡಿವಿಷನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಸಂಯುಕ್ತ ಆಶ್ರಯದಲ್ಲಿ 3 ದಿನಗಳಲ್ಲಿ 4 ದೇಶಗಳ 14 ಸಿನಿಮಾಗಳ ಪ್ರದರ್ಶನ ನಡೆಯಲಿದೆ.







