ಮೊದಲ ಟ್ವೆಂಟಿ-20: ವಿಂಡೀಸ್ ವಿರುದ್ಧ ಪಾಕ್‌ಗೆ ಸುಲಭ ಜಯ
ಇಮಾದ್ ವಸೀಂ ಜೀವನಶ್ರೇಷ್ಠ ಬೌಲಿಂಗ್

ದುಬೈ, ಸೆ.24: ಎಡಗೈ ಸ್ಪಿನ್ನರ್ ಇಮಾದ್ ವಸೀಂ ಅವರ ಜೀವನಶ್ರೇಷ್ಠ ಬೌಲಿಂಗ್(5-14) ಸಹಾಯದಿಂದ ಪಾಕಿಸ್ತಾನ ತಂಡ ಹಾಲಿ ಟ್ವೆಂಟಿ-20 ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಶುಕ್ರವಾರ ಇಲ್ಲಿ ನಡೆದ ಪ್ರಥಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಸೀಂ ಸ್ಪಿನ್ ಮೋಡಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ 19.5 ಓವರ್‌ಗಳಲ್ಲಿ ಕೇವಲ 115 ರನ್‌ಗೆ ಸರ್ವಪತನವಾಯಿತು.
ಗೆಲ್ಲಲು ಸುಲಭ ಸವಾಲು ಪಡೆದ ಪಾಕಿಸ್ತಾನ 14.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಅರ್ಧಶತಕ ಬಾರಿಸಿದ ಡ್ವೇಯ್ನ ಬ್ರಾವೊ(55ರನ್) ತಂಡವನ್ನು ಅತ್ಯಂತ ಕನಿಷ್ಠ ಮೊತ್ತದಿಂದ ಪಾರು ಮಾಡಿದರು. ಬ್ರಾವೊ ಅವರು ಜೆರೊಮ್ ಟೇಲರ್(21) ಅವರೊಂದಿಗೆ 9ನೆ ವಿಕೆಟ್‌ಗೆ 66 ರನ್ ಸೇರಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದರು.
ಗೆಲ್ಲಲು 116 ರನ್ ಗುರಿ ಪಡೆದಿದ್ದ ಪಾಕಿಸ್ತಾನ ಆರಂಭಿಕ ಆಟಗಾರ ಶಾರ್ಜೀಲ್ ಖಾನ್(22)ರನ್ನು ಇನಿಂಗ್ಸ್‌ನ ನಾಲ್ಕನೆ ಓವರ್‌ನಲ್ಲಿ ಕಳೆದುಕೊಂಡಿತು. ಆದರೆ, ಬಾಬರ್ ಆಝಂ(ಔಟಾಗದೆ 55) ಹಾಗೂ ಖಾಲಿದ್ ಲತೀಫ್(ಔಟಾಗದೆ 34) ತಂಡಕ್ಕೆ ಮತ್ತೆ ಹಿನ್ನಡೆಯಾಗದಂತೆ ನೋಡಿಕೊಂಡು ಗುರಿಯನ್ನು ಸುಲಭವಾಗಿ ತಲುಪಿಸಿದರು.
ಸತತ ಎರಡು ಬೌಂಡರಿ ಬಾರಿಸಿದ ಬಾಬರ್ ಪಾಕ್‌ಗೆ ಭರ್ಜರಿ ಗೆಲುವು ತಂದುಕೊಟ್ಟರು. 37 ಎಸೆತಗಳ ಇನಿಂಗ್ಸ್‌ನಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿದರು.
ವಿಂಡೀಸ್‌ಗೆ ಬ್ರಾವೊ ಆಸರೆ: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ 11.3 ಓವರ್‌ಗಳಲ್ಲಿ 48 ರನ್‌ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ 54 ಎಸೆತಗಳಲ್ಲಿ ನಾಲ್ಕನೆ ಅರ್ಧಶತಕ ಬಾರಿಸಿದ ಬ್ರಾವೊ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಜೀವನಶ್ರೇಷ್ಠ ಬೌಲಿಂಗ್ ಮೂಲಕ ವೃತ್ತಿಜೀವನದಲ್ಲಿ ಹೊಸ ಮೈಲುಗಲ್ಲು ತಲುಪಿದ ವಸೀಂ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ನಾಯಕ ಸರ್ಫರಾಜ್ ಅಹ್ಮದ್ ನಿರ್ಧಾರವನ್ನು ಸಮರ್ಥಿಸಿಕೊಂಡರು.
ವಿಂಡೀಸ್ ಇನಿಂಗ್ಸ್‌ನ 5ನೆ ಎಸೆತದಲ್ಲಿ ಆರಂಭಿಕ ಆಟಗಾರ ಎವಿನ್ ಲೂವಿಸ್(1)ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ವಸೀಂ ವಿಂಡೀಸ್‌ಗೆ ಆರಂಭಿಕ ಆಘಾತ ನೀಡಿದರು. ಆ್ಯಂಡ್ರೆ ಫ್ಲೆಚರ್(2) ಹಾಗೂ ಮರ್ಲಾನ್ ಸ್ಯಾಮುಯೆಲ್ಸ್(4) ವಿಕೆಟ್ ಉರುಳಿಸಿದ ವಸೀಂ ವಿಶ್ವ ಚಾಂಪಿಯನ್ ತಂಡ 15 ರನ್‌ಗೆ 3 ವಿಕೆಟ್ ಕಳೆದುಕೊಳ್ಳಲು ಕಾರಣರಾದರು. 11ನೆ ಓವರ್‌ನಲ್ಲಿ ಪೊಲಾರ್ಡ್(9) ಹಾಗೂ ನಾಯಕ ಬ್ರಾತ್‌ವೈಟ್(0) ವಿಕೆಟ್‌ನ್ನು ಕಬಳಿಸಿದ ವಸೀಂ ಐದು ವಿಕೆಟ್ ಗೊಂಚಲು ಪಡೆದರು.
ವಿಂಡೀಸ್ 48ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದಾಗ ಟೇಲರ್‌ರೊಂದಿಗೆ 9ನೆ ವಿಕೆಟ್‌ಗೆ 66 ರನ್ ಜೊತೆಯಾಟ ನಡೆಸಿದ ಬ್ರಾವೊ ಇದೇ ಮೈದಾನದಲ್ಲಿ 3 ವರ್ಷಗಳ ಹಿಂದೆ ಸಯೀದ್ ಅಜ್ಮಲ್ ಹಾಗೂ ಸೊಹೈಲ್ ತನ್ವೀರ್ ನಡೆಸಿದ್ದ 66 ರನ್ ಜೊತೆಯಾಟದ ದಾಖಲೆಯನ್ನು ಮುರಿದರು.
ಉಭಯ ತಂಡಗಳು ಶನಿವಾರ ದುಬೈನಲ್ಲಿ ಎರಡನೆ ಪಂದ್ಯವನ್ನು ಆಡಲಿವೆ. ಮೂರನೆ ಪಂದ್ಯ ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಎರಡು ತಂಡಗಳು ಮೂರು ಏಕದಿನ ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ.







