ಭಾರತದ ವಿರುದ್ಧ ಚೀನಾದ ಪ್ರಬಲ ಅಸ್ತ್ರ - ನೀರು

♦ ಚೀನಾದಲ್ಲಿವೆ ಒಟ್ಟು 87,000 ಅಣೆಕಟ್ಟುಗಳು!
♦ ಟಿಬೆಟ್‌ನ ನದಿಗಳು, ಅಣೆಕಟ್ಟುಗಳಿಂದ ಭಾರತಕ್ಕಿದೆ ಭಾರೀ ಅಪಾಯ
♦ ನೀರಿನ ಮೂಲಕ ಇಡೀ ಏಷ್ಯಾದ ಮೇಲೆ ಚೀನಾ ನಿಯಂತ್ರಣ
♦ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ ಭಾರತದ ನೀರಿನ ಅಗತ್ಯ
♦ ಚೀನಾದ ನದಿ ರಾಜತಾಂತ್ರಿಕತೆಗೆ ಕಡಿವಾಣ ಅಗತ್ಯ
ಹೊಸದಿಲ್ಲಿ, ಸೆ.24: ಚೀನಾದಲ್ಲಿ ಒಟ್ಟು 87,000 ಅಣೆಕಟ್ಟುಗಳಿದ್ದು ಅವುಗಳಲ್ಲಿ ಹೆಚ್ಚಿನವು ಟಿಬೆಟ್‌ನಲ್ಲಿವೆಯೆಂಬುದು ಆಶ್ಚರ್ಯಕಾರಿ ಹಾಗೂ ದಿಗ್ಭ್ರಮೆಗೊಳಿಸುವ ಮಾಹಿತಿ ನಿಜ. ಈ ವಿಚಾರವನ್ನು ಇದೀಗ ತಜ್ಞರು ಗಂಭೀರವಾಗಿ ಪರಿಗಣಿಸಿದ್ದು, ಏಷ್ಯಾ ಖಂಡದ ರಾಷ್ಟ್ರಗಳು ಒಂದಾಗಿ, ಗಡಿಯಾಚೆಗಿನ ನೀರು ಹಂಚಿಕೆ ಒಪ್ಪಂದವೊಂದಕ್ಕೆ ಸಹಿ ಹಾಕುವಂತೆ ಚೀನಾದ ಮೇಲೆ ಒತ್ತಡ ಹೇರಿ ಅದರ ಅಸಂಖ್ಯಾತ ಅಣೆಕಟ್ಟು ಕಟ್ಟುವ ನೀತಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಏಷ್ಯಾದಲ್ಲಿ ಹರಿಯುವ ಹತ್ತು ನದಿಗಳ ಉಗಮ ಸ್ಥಾನ ಟಿಬೆಟ್‌ನಲ್ಲಿದ್ದು ಈ ನದಿಗಳ ನೀರನ್ನು ವಿಶ್ವದ ಶೇ.25ರಷ್ಟು ಜನಸಂಖ್ಯೆ ಅವಲಂಬಿಸಿದೆ.
‘‘ಟಿಬೆಟ್‌ನಲ್ಲಿರುವ ಅಸಂಖ್ಯಾತ ಅಣೆಕಟ್ಟುಗಳು ಪರಿಸರಕ್ಕೆ ಸಮಸ್ಯೆ ಯೊಡ್ಡುವವಲ್ಲದೆ ಇತರ ದೇಶಗಳಿಗೆ ವಿನಾಶಕಾರಿಯಾಗಬಹುದು. ಅವುಗಳು ಭೂಕಂಪ, ಅಪಘಾತ ಅಥವಾ ಉದ್ದೇಶ ಪೂರ್ವಕ ವಿನಾಶದ ಸಂದರ್ಭ ದಲ್ಲಿ ಅನಗತ್ಯ ಸಮಸ್ಯೆಯೊಡ್ಡಬಹುದಲ್ಲದೆ ಯುದ್ಧದಂತಹ ಸಂದರ್ಭದಲ್ಲಿ ಭಾರತದ ವಿರುದ್ಧ ಈ ನೀರನ್ನೇ ಅಸ್ತ್ರವನ್ನಾಗಿ ಉಪಯೋಗಿಸಬಹುದಾಗಿದೆ,’’ ಎಂದು ಜೆಎನ್‌ಯು ಪ್ರೊಫೆಸರ್ ಮಿಲಾಪ್ ಚಂದ್ರ ಶರ್ಮ ಹೇಳುತ್ತಾರೆ. ಅವರು ‘‘ಡ್ಯಾಮಿಂಗ್ ಕ್ರೈಸಿಸ್ ಇನ್ ಟಿಬೆಟ್ ಥ್ರೆಟ್ ಟು ವಾರ್ ಸೆಕ್ಯುರಿಟಿ ಇನ್ ಏಷ್ಯಾ’’ ಎಂಬ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದರು.
‘ಸ್ಟೂಡೆಂಟ್ಸ್ ಫಾರ್ ಎ ಫ್ರೀ ಟಿಬೆಟ್-ಇಂಡಿಯಾ’’ ಮಾರ್ಚ್ 2015ರಲ್ಲಿ ಆರಂಭಿಸಿದ ‘ಟಿಬೆಟ್ಸ್ ರಿವರ್ಸ್, ಏಷ್ಯಾಸ್ ಲೈಫ್ ಲೈನ್ ’’ (ಟಿಬೆಟಿನ ನದಿಗಳು-ಏಷ್ಯಾದ ಜೀವನಾಡಿ) ಇದರ ಭಾಗವಾಗಿರುವ ಭಾರತ, ಥಾಯ್ಲೆಂಡ್, ಬಾಂಗ್ಲಾದೇಶ ಹಾಗೂ ಟಿಬೆಟ್‌ನ ತಜ್ಞರು ಹಾಗೂ ಕಾರ್ಯಕರ್ತರ ಪ್ರಕಾರ ನೀರನ್ನು ತಡೆ ಹಿಡಿದು ಯಾ ಬಿಡುಗಡೆ ಮಾಡಿ ಟಿಬೆಟ್‌ನಲ್ಲಿರುವ ಚೀನಾದ ಅಣೆಕಟ್ಟುಗಳು ನೇರ ಯಾ ಪರೋಕ್ಷವಾಗಿ ಈ ನದಿಗಳನ್ನು ಅವಲಂಬಿಸಿರುವ 200 ಕೋಟಿ ಏಷ್ಯನ್ನರ ಮೇಲೆ ಪರಿಣಾಮ ಬೀರಿವೆ. ‘‘ರಾಜತಾಂತ್ರಿಕತೆಯ ವಿಷಯ ಬಂದಾಗ, ಚೀನಾ ಈ ನದಿಗಳನ್ನು ಚೌಕಾಶಿಗಾಗಿ ಉಪಯೋಗಿಸುತ್ತಿದೆ’’ ಎಂದು ಥಾಯ್ಲೆಂಡಿನ ಮೆಕಾಂಗ್ ನದಿ ಸಂರಕ್ಷಣಾ ಕಾರ್ಯಕರ್ತ ತನಸಕ್ ಫೊಸ್ರಿಕುನ್ ಹೇಳುತ್ತಾರೆ. ಸಾಮಾಜಿಕ ಕಾರ್ಯಕರ್ತರು ಹೇಳುವಂತೆ ಮೆಕಾಂಗ್ ನದಿ ಹರಿವು ಪ್ರದೇಶಗಳಲ್ಲಿ ಚೀನಾ ಸುಮಾರು ಏಳು ಅಣೆಕಟ್ಟುಗಳನ್ನು ಕಟ್ಟಿದ್ದರೆ ನದಿಯಲ್ಲಿ ಒಟ್ಟು 21 ಅಣೆಕಟ್ಟುಗಳನ್ನು ಕಟ್ಟಿದೆ.
ಇದರ ಹೊರತಾಗಿ ಸಲ್ವೀನ್ ಯಾ ನು ನದಿಗೆ ಅಡ್ಡಲಾಗಿ 24 ಅಣೆಕಟ್ಟುಗಳು, ಇಂಡಸ್ (ಸಿಂಧೂ) ನದಿಗೆ ಅಡ್ಡಲಾಗಿ 2 ಹಾಗೂ ಯಾರ್ಲುಂಗ್ ತ್ಸಾಂಪ ಯಾ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ 11 ಅಣೆಕಟ್ಟುಗಳನ್ನು ಕಟ್ಟಿದೆ.
‘‘ಭಾರತವು ಪಾಕಿಸ್ತಾನದ ವಿರುದ್ಧ ನೀರನ್ನು ಅಸ್ತ್ರವನ್ನಾಗಿ ಉಪಯೋಗಿಸುವುದೋ ಅಥವಾ ಇಲ್ಲವೋ ಎಂದು ನಮಗೆ ತಿಳಿದಿಲ್ಲ. ಆದರೆ ಚೀನಾ ಮಾತ್ರ ಭಾರತದ ವಿರುದ್ಧ ಈ ನೀರಿನ ಅಸ್ತ್ರ ಉಪಯೋಗಿಸಲು ಹಿಂಜರಿಯಲಿಕ್ಕಿಲ್ಲ’’ ಎಂದು ಟಿಬೆಟ್ ಪಾಲಿಸಿ ಇನ್‌ಸ್ಟಿಟ್ಯೂಟ್ ಇಲ್ಲಿನ ಸಂಶೋಧಕ ತೆಂಪಾ ಗ್ಯಾಲ್ ತ್ಸೆನ್ ಹೇಳಿದ್ದಾರೆ.
ಭಾರತದ ನೀರಿನ ಬೇಡಿಕೆ ಪ್ರತಿಯೊಬ್ಬ ವ್ಯಕ್ತಿಗೆ ಈಗಿನ 740 ಬಿಲಿಯನ್ ಕ್ಯೂಬಿಕ್ ಮೀಟರಿನಿಂದ 1.5 ಟ್ರಿಲಿಯನ್ ಕ್ಯೂಬಿಕ್ ಮೀಟರಿಗೆ ಹೆಚ್ಚುವುದು ಎಂದು ಅವರು ವರದಿಯೊಂದನ್ನು ಉಲ್ಲೇಖಿಸಿದರು.
‘‘ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಪ್ರಮುಖ ಸ್ಥಳದಲ್ಲಿ ಕಟ್ಟಲಾಗಿರುವ ಝಂಗ್ಮು ಹೈಡ್ರೋಪವರ್ ಅಣೆಕಟ್ಟು, ಯಲೋಂಗ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಯಾಂಘೆಕೌ ಅಣೆಕಟ್ಟು ಹಾಗೂ ಸಲ್ವೀನ್ ಹಾಗೂ ಮೆಕಾಂಗ್ ನದಿಗಳಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ಅಣೆಕಟ್ಟುಗಳು ನದಿ ನೀರು ಹರಿಯುವ ಪ್ರದೇಶಗಳಲ್ಲಿರುವ ದೇಶಗಳ ಲಕ್ಷಗಟ್ಟಲೆ ಜನರ ಬದುಕು ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ’’ ಎಂದು ತೆಂಪಾ ಅಭಿಪ್ರಾಯಿಸಿದ್ದಾರೆ.
ಟಿಬೆಟ್‌ನಿಂದ ಸಾಕಷ್ಟು ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಯಾವುದೇ ಪರಿಹಾರ ನೀಡಲಾಗುತ್ತಿಲ್ಲವೆಂದು ಹೇಳಿದ ಅವರು, 2008ರ ಸಿಚುವಾನ್ ಭೂಕಂಪ ಹಾಗೂ ಶಿಮಂತನ್ ಅಣೆಕಟ್ಟಿನಿಂದಾಗಿ 1975ರಲ್ಲಿ ಉಂಟಾದ ಸಮಸ್ಯೆಗಳನ್ನು ವಿವರಿಸಿದ್ದಾರೆ.
‘‘ಇವುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳು ಟಿಬೆಟ್‌ನಲ್ಲಿ ಪೆಟ್ರೋಲಿಯಂ ಹಾಗೂ ಗಣಿ ಯೋಜನೆಗಳ ಪಕ್ಕದಲ್ಲಿಯೇ ಇವೆ. ಹಲವು ಕೆರೆಗಳು ಕಲುಷಿತಗೊಳ್ಳುತ್ತವೆ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳು ಇಲ್ಲಿ ಯಾವುದೇ ಅಧ್ಯಯನ ನಡೆಸುವ ಹಾಗಿಲ್ಲ. ಸ್ಥಳೀಯರೂ ಅಲ್ಲಿ ಪ್ರತಿಭಟಿಸುತ್ತಾರೆ’’ ಎಂದು ಟಿಬೆಟ್‌ನ ಸಾಮಾಜಿಕ ಕಾರ್ಯಕರ್ತೆ ಜ್ಯೋತ್ಸ್ನಾಜಾರ್ಜ್ ಹೇಳುತ್ತಾರೆ. ಅಲ್ಲದೆ ಈ ಬಗೆಗಿನ ವೀಡಿಯೊ ಹಾಗೂ ಚಿತ್ರಗಳನ್ನು ಟಿಬೆಟಿಯನ್ನರು ತಮ್ಮ ಜೀವದ ಹಂಗು ತೊರೆದು ಕಳುಹಿಸುತ್ತಾರೆಂದು ಅವರು ತಿಳಿಸಿದ್ದಾರೆ.
ಮೆಕಾಂಗ್ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸಿರುವ ಅಣೆಕಟ್ಟುಗಳಿಂದಾಗಿ ಥಾಯ್ಲೆಂಡ್, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ ಹಾಗೂ ಕಾಂಬೋಡಿಯಾ ದೇಶಗಳ ಜನರು ನೇರ ಹಾಗೂ ಪರೋಕ್ಷ ಸಮಸ್ಯೆ ಎದುರಿಸುತ್ತಿದ್ದಾರೆಂದು ತನಸಕ್ ವಿವರಿಸುತ್ತಾರೆ.
‘‘4,500 ಕಿ.ಮೀ. ಉದ್ದದ ಮೆಕಾಂಗ್ ನದಿಯನ್ನು 70 ಮಿಲಿಯನ್ ಜನರು ಅವಲಂಬಿಸಿದ್ದಾರೆ. ಸುಮಾರು 40 ಮಿಲಿಯನ್ ಜನರು ಮೀನುಗಾರಿಕೆ ಹಾಗೂ ಕೃಷಿ ಚಟು ವಟಿಕೆಗಳಲ್ಲಿ ನದಿ ತೀರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ನದಿ ಚೀನಾದ ಪಾಲಾಗಿದೆ’’ ಎಂದವರು ಹೇಳುತ್ತಾರೆ.
ಆಪಾಯವುಂಟಾಗಬಹುದೆಂದು ಹೆದರಿ ಭಾರೀ ಮಳೆಯಾದಾಗಲೆಲ್ಲ ಚೀನಾ ತನ್ನ ಅಣೆಕಟ್ಟಿನ ಗೇಟುಗಳನ್ನು ತೆರೆಯುತ್ತದೆ. ಇದರಿಂದ ದಿಢೀರ್ ಪ್ರವಾಹಗಳುಂಟಾಗಿ ಜೀವ ಹಾನಿ ಹಾಗೂ ಆಹಾರ ಸಮಸ್ಯೆ ಉಂಟಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಪ್ರಜಾಪ್ರಭುತ್ವವಿಲ್ಲದೆ ಮಾನವ ಹಕ್ಕುಗಳನ್ನು ಯಾ ಪರಿಸರವನ್ನು ರಕ್ಷಿಸಲು ಅಸಾಧ್ಯವೆಂದು ಅವರು ಹೇಳಿದರು. ‘‘ನೀವು ನದಿಗಳನ್ನು ನಿಮ್ಮ ಪೂರ್ವಜರಿಂದ ಬಳುವಳಿಯಾಗಿ ಪಡೆಯುವುದಿಲ್ಲ. ನಿಮ್ಮ ಮಕ್ಕಳಿಂದ ಅವುಗಳನ್ನು ಸಾಲಕ್ಕೆ ತೆಗೆದುಕೊಳ್ಳುತ್ತಿದ್ದೀರಿ’’ ಎಂದು ಫೊಸ್ರಿಕುನ್ ಎಚ್ಚರಿಸಿದ್ದಾರೆ.







