ನಿರುಪಯುಕ್ತ ತೈಲ ಬಳಕೆ
ಮಾಲಿನ್ಯಉಂಟಾದರೆ ಕಟ್ಟುನಿಟ್ಟಿನ ಕ್ರಮ
ಬೆಂಗಳೂರು, ಸೆ. 24: ಬಳಸಿದ ಮತ್ತು ನಿರುಪಯುಕ್ತ ತೈಲವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪಡೆದು ವಾಹನಗಳಲ್ಲಿ ಮಾತ್ರ ಸಾಗಿಸಬೇಕು. ಆ ವಾಹನಗಳಿಗೆ ಜಿಪಿಎಸ್‌ನ್ನು ಅಳವಡಿಸಿರಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಸೂಚಿಸಿದ್ದಾರೆ.
ಇತ್ತೀಚೆಗೆ ಮಂಡಳಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ್ದು, ದೊಡ್ಡ ಪ್ರಮಾಣದಲ್ಲಿ ಬಳಸಿದ ಮತ್ತು ನಿರುಪಯುಕ್ತ ತೈಲವನ್ನು ಉತ್ಪತ್ತಿಯಾಗುವ ವಾಹನಗಳ ಸರ್ವೀಸ್ ಸ್ಟೇಷನ್ ಹಾಗೂ ಇತರೆ ಘಟಕಗಳನ್ನು ಕಾಲಕಾಲಕ್ಕೆ ಪರಿವೀಕ್ಷಣೆ ಮಾಡಲಾಗುವುದು. ಈ ವೇಳೆ ನ್ಯೂನತೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ಅಂತಹವರ ಪಟ್ಟಿಯನ್ನು ಮಂಡಳಿಯ ಅಂತರ್ಜಾಲದಲ್ಲಿ ದೋಷಿಗಳೆಂದು ಪ್ರಕಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉದ್ದಿಮೆಗಳು ಹಾಗೂ ಮರು ಸಂಸ್ಕರಣಾ ಘಟಕಗಳು ಬಳಸಿದ ಮತ್ತು ನಿರುಪಯುಕ್ತ ತೈಲವನ್ನು ಕೇವಲ ವ್ಯಾಪಾರ ಮಾಡಿ ಮರು ಸಂಸ್ಕರಣೆ ಮಾಡದಿದ್ದರೆ ಅಂತಹವರ ವಿರುದ್ಧ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು. ಮಂಡಳಿಯು ಇನ್ನು ಮುಂದೆ ತೈಲ ತಯಾರಿಕಾ ಘಟಕಗಳು ಹಾಗೂ ಸಂಬಂಧಿಸಿದ ಸರಕಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಿ ನ್ಯೂನತೆಗಳ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಕ್ರಮ ವಹಿಸಲು ಸೂಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
ತೈಲ ಸಂಸ್ಕರಣ ಸಂಘದ ವತಿಯಿಂದ ಮರು ಸಂಸ್ಕರಣ ಘಟಕಗಳನ್ನು ಮೂರನೆ ವ್ಯಕ್ತಿಯಿಂದ ಲೆಕ್ಕ ಪರಿಶೋಧನೆ ನಡೆಸಬೇಕೆಂದು ನಿರ್ದೇಶಿಸಲಾಗಿದೆ. ಅಪಾಯಕಾರಿ ತ್ಯಾಜ್ಯವು ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದ್ದು, ಇದರ ನಿರ್ವಹಣೆ ಅಪಾಯಕಾರಿ ತ್ಯಾಜ್ಯ ಕಾಯ್ದೆ ಬದಲಾವಣೆ ಮಾಡಲಾಗಿದೆ ಎಂದರು.
ಬಳಸಿದ ಮತ್ತು ನಿರುಪಯುಕ್ತ ತೈಲ ಮರುಸಂಸ್ಕರಣೆ ಮಾಡುವ 34 ಘಟಕಗಳಿಗೆ ಸಮ್ಮತಿ ಪತ್ರವನ್ನು ನೀಡಿರುತ್ತದೆ. ಈ ಘಟಕಗಳ ನಿರ್ವಹಣೆಯಲ್ಲಿ ಕಂಡು ಬಂದಿರುವ ಕೆಲವು ನ್ಯೂನತೆಗಳನ್ನು ಕಂಡಿದ್ದಾರೆ. ಸದರಿ ಘಟಕಗಳು ಸ್ವೀಕರಿಸುತ್ತಿರುವ ಬಳಸಿದ ಮತ್ತು ನಿರುಪಯುಕ್ತ ತೈಲದ ಗುಣಮಟ್ಟವನ್ನು ಗಮನಿಸಿದ್ದು, ಇದರಿಂದ ವಾಯು ಮಾಲಿನ್ಯ ಉಂಟಾಗುವುದು ಗೊತ್ತಾಗಿದೆ ಎಂದು ಪ್ರಕಟನೆ ತಿಳಿಸಿದೆ.





