ಜನಸಾಮಾನ್ಯರ ಪ್ರಶ್ನೆಗಳಿಗೆ ಗಮಕಾಭ್ಯಾಸವೇ ಉತ್ತರ ಮನೆಯಂಗಳದಲ್ಲಿ ಡಾ.ಎ.ವಿ.ಪ್ರಸನ್ನ
ಬೆಂಗಳೂರು, ಸೆ.24: ಮನಃಶುದ್ಧಿ, ಭಾಷಾಶುದ್ಧಿ ಮತ್ತು ಶ್ರುತಿಶುದ್ಧಿಗಳನ್ನು ಸಾಧಿಸಿಕೊಳ್ಳುವುದು ಹೇಗೆ?. ಪುರಾತನ ಜೀವನಕ್ರಮದ ಮೌಲ್ಯಗಳನ್ನು ತಿಳಿಯುವ ಬಗೆ ಯಾವುದು. ಹೀಗೆ ಸಾಮಾನ್ಯರಲ್ಲಿ ಮೂಡಬಹುದಾದ ಹಲವು ಪ್ರಶ್ನೆಗಳಿಗೆ ಗಮಕಾಭ್ಯಾಸವೆ ಸಿದ್ಧ ಉತ್ತರವೆಂದು ಖ್ಯಾತ ಗಮಕಿ, ವ್ಯಾಖ್ಯಾನಕಾರ ಮತ್ತು ನಿವೃತ್ತ ಉನ್ನತಾಧಿಕಾರಿ ಡಾ.ಎ.ವಿ.ಪ್ರಸನ್ನ ತಿಳಿಸಿದರು.
ಕನ್ನಡ-ಸಂಸ್ಕೃತಿ ಇಲಾಖೆಯ ‘ಮನೆಯಂಗಳದಲ್ಲಿ ಮಾತುಕತೆ’ ಸರಣಿ ಕಾರ್ಯಕ್ರಮದ 180ನೆ ಅತಿಥಿಯಾಗಿ ಮಾತನಾಡಿದ ಅವರು, ಜನರಿಂದ ತೆರಿಗೆಯನ್ನು ಹೇಗೆ ಸಂಗ್ರಹಿಸಬೇಕು, ರಾಜಕಾರಣಿಗಳು ಯಾರ ಜತೆ ಎಂತೆಂಥ ಸಂಬಂಧ ಹೊಂದಿರಬೇಕು, ಚತುರೋಪಾಯಗಳನ್ನು ಯಾವ ರೀತಿ ಪ್ರಯೋಗಿಸಬೇಕು.. ಹೀಗೆ ಜನಸಾಮಾನ್ಯರ ಹತ್ತು ಹಲವು ಪ್ರಶ್ನೆಗಳಿಗೆ ಮನ ಬಿಚ್ಚಿ ಉತ್ತರಿಸಿದರು.
ನನಗೆ ಮೊದಲು ಗಮಕ ಕಿವಿಗೆ ಬಿದ್ದಿದ್ದು ನಮ್ಮ ತಂದೆಯವರಾದ ವೆಂಕಟಕೃಷ್ಣಪ್ಪನವರ ಬಾಯಿಯಿಂದ. ಆಗ ನನಗೆ ಐದೋ, ಆರೋ ವರ್ಷವಾಗಿತ್ತಷ್ಟೆ. ಅವರು ಅಠಾಣ ಮತ್ತು ಕೇದಾರಗೌಳ ರಾಗಗಳಲ್ಲಿ ಕನ್ನಡದ ಮಹಾಕವಿಗಳ ಪದ್ಯಗಳನ್ನು ವಾಚಿಸುತ್ತಿದ್ದರೆ ರೋಮಾಂಚನವಾಗುತ್ತಿತ್ತು. ಆದರೆ, ನನಗೆ ಅಂಥಹ ಅನುಭವಗಳನ್ನು ಕೊಟ್ಟ ನಮ್ಮ ಊರಾದ ಆಲೂರು ತಾಲೂಕಿನ ಪೊನ್ನಾಥಪುರ ಗ್ರಾಮವು ಹೇಮಾವತಿ ಅಣೆಕಟ್ಟೆಯಲ್ಲಿ ಮುಳುಗಡೆಯಾಗಿ ಹೋಯಿತು. ಅದನ್ನು ನೆನಪಿಸಿಕೊಂಡರೆ ನೋವಾಗುತ್ತದೆ ಎಂದು ಅವರು ಹೇಳಿದರು.
ನಾನು ಹಲವೆಡೆಗಳಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಆಗೆಲ್ಲ, ನಮ್ಮ ಅಧಿಕಾರಿಗಳು ಕಂದಾಯ ಕಟ್ಟಲಿಲ್ಲವೆಂದು ಅಮಾಯಕರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನೋಡಿದ್ದೇನೆ. ಆಗೆಲ್ಲ ನಾನು, ನಮ್ಮ ಅಧಿಕಾರಿಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದೆ. ಅಂತಹ ಒಂದು ಅಂತಃಕರಣ ಮತ್ತು ಮನುಷ್ಯಪ್ರೀತಿ ನನಗೆ ಬಂದಿದ್ದೇ ಗಮಕಾಭ್ಯಾಸದಿಂದ. ಇಲ್ಲದಿದ್ದರೆ, ನಾನೂ ಒಬ್ಬ ಹೃದಯಹೀನ ಅಧಿಕಾರಿಯಾಗಿರುತ್ತಿದ್ದೆ ಅಷ್ಟೆ ಎಂದು ಅವರು ತಮ್ಮ ವೃತ್ತಿಜೀವನದ ಗುಟ್ಟನ್ನು ಬಿಚ್ಚಿಟ್ಟರು.
1982ರಲ್ಲಿ ಮಡಿಕೇರಿಯಲ್ಲಿ ತಹಶೀಲ್ದಾರನಾಗಿದ್ದಾಗ ಅಲ್ಲಿನ ವೇದಾಂತ ಸಂಘದಲ್ಲಿ ಮೊತ್ತಮೊದಲ ಸಾರ್ವಜನಿಕ ಗಮಕ-ವ್ಯಾಖ್ಯಾನದಲ್ಲಿ ಪಾಲ್ಗೊಂಡೆ. ಅಲ್ಲಿನ ವಕೀಲ ಬಾಲಸುಬ್ರಹ್ಮಣ್ಯ ಅವರಿಂದ ಇದು ಸಾಧ್ಯವಾಯಿತು ಎಂದು ಗಮಕ ಹಾದಿಯನ್ನು ವಿವರಿಸಿದರು.
ನಾನು ಸರಕಾರಿ ಅಧಿಕಾರಿಯಾದ್ದರಿಂದ ಮೊದಲೆಲ್ಲ ಪಂಚೆ ಹಾಕಿಕೊಂಡು ಹೋಗಿ, ಗಮಕ ನಡೆಸಿಕೊಡಲು ತುಸು ಹಿಂಜರಿಕೆ ಆಗುತ್ತಿತ್ತು. ಆದರೆ, ಆಮೇಲೆ ಅದು ಹಿಂದಕ್ಕೆ ಸರಿದು ಗಮಕ-ವ್ಯಾಖ್ಯಾನ ಮೇಲುಗೈ ಸಾಧಿಸಿತು. ನಂತರ ಅದೇ ವರ್ಷ ನಾನು ಬೆಂಗಳೂರಿಗೆ ವರ್ಗವಾಗಿ ಬಂದೆ. ಆಗ ಇಲ್ಲಿ ರಾಜಾಜಿನಗರದ ಕುಮಾರವ್ಯಾಸ ಮಂಟಪದ ರಾಜಾರಾಯರು, ಮಾಧವಾಚಾರ್ ಮುಂತಾದವರು ನನಗೆ ಅಪಾರ ಬೆಂಬಲ ನೀಡಿದರು ಪ್ರಸನ್ನ ಅವರು ಸ್ಮರಿಸಿದರು.







