ಸಂಪುಟಕ್ಕೆ ಜಾರ್ಜ್ ಮರು ಸೇರ್ಪಡೆ
ನಾಳೆ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಸೆ.24: ಕೆ.ಜೆ.ಜಾರ್ಜ್ ಅವರ ಸಚಿವ ಸಂಪುಟ ಮರುಸೇರ್ಪಡೆಗೆ ಕ್ಷಣಗಣನೆ ಆರಂಭವಾಗಿದ್ದು, ಸೆ.26ರ ಬೆಳಗ್ಗೆ 10:15ರ ಸುಮಾರಿಗೆ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದ ಹಿರಿಯ ಸಹೋದ್ಯೋಗಿಗಳ ಸಮ್ಮುಖದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದು, ಈಗಾಗಲೇ ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.
ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಮೊದಲು ನೀಡಿದ್ದ ಹೇಳಿಕೆಯಲ್ಲಿ ಜಾರ್ಜ್ ಅವರ ಹೆಸರನ್ನು ಉಲ್ಲೇಖಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಹೀಗಾಗಿ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಬಳಿಕ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಜಾರ್ಜ್ ಮೇಲಿನ ಆರೋಪಗಳನ್ನು ಪುಷ್ಟೀಕರಿಸುವ ಸೂಕ್ತ ಸಾಕ್ಷಾಧಾರ ಮತ್ತು ದಾಖಲೆಗಳಿಲ್ಲ ಎಂದು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ ಜಾರ್ಜ್ ಆರೋಪ ಮುಕ್ತರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಲ್ಲಿಗೆ ತೆರಳಿ ಜಾರ್ಜ್‌ರನ್ನು ಸಂಪುಟಕ್ಕೆ ಮರು ಸೇರ್ಪಡೆಗೊಳಿಸುವ ಸಂಬಂಧ ಹೈಕಮಾಂಡ್ ಜತೆ ಸಮಾ ಲೋಚನೆ ನಡೆಸಿ ಅಂಗೀಕಾರವನ್ನು ಪಡೆದಿ ದ್ದರು. ಹೀಗಾಗಿ ಸೆ.26ರ ಸೋಮವಾರ ಜಾರ್ಜ್‌ರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮುಂದೂಡಲಾಗಿತ್ತು. ನಿನ್ನೆಯಷ್ಟೇ ವಿಧಾನ ಮಂಡಲದ ಉಭಯ ಸದನಗಳಲ್ಲಿ ‘ಕಾವೇರಿ ನೀರು ಕುಡಿಯಲು ಮಾತ್ರ’ ಎಂಬ ಒಮ್ಮತದ ನಿರ್ಣಯ ಕೈಗೊಂಡಿದ್ದು, ಆ ವಿವಾದಕ್ಕೆ ತೆರೆ ಬಿದ್ದಂತಾಗಿದೆ.
ರಾಜಭವನದಲ್ಲಿ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಸ್ತುತ ಸಿದ್ದರಾಮಯ್ಯನವರ ಬಳಿಯೇ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ಜಾರ್ಜ್ ಅವರಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.







