ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್!

ಬೆಂಗಳೂರು, ಸೆ.24: ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮಹಾಪೌರರ ಪಟ್ಟ ಅಲಂಕರಿಸುವವರು ಯಾರು ಎಂಬ ಜಿಜ್ಞಾಸೆ ಕಾಡತೊಡಗಿದೆ.
ಈ ಬಾರಿ ಮೇಯರ್ ಆಯ್ಕೆ ತೀರ್ಮಾನ ಕುಮಾರಸ್ವಾಮಿ ಅವರು ನಿರ್ಧರಿಸಲಿದ್ದು, ಇಂದು ಅಥವಾ ನಾಳೆ ಜೆಡಿಎಸ್ ಯಾವ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮೇಯರ್ ಸ್ಥಾನ ಅಲಂಕರಿಸುವ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ. ಜೆಡಿಎಸ್ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಪ್ರಕಾಶ್‌ನಗರ ವಾರ್ಡ್‌ನ ಅತ್ಯಂತ ಹಿರಿಯ ಸದಸ್ಯೆ ಜಿ.ಪದ್ಮಾವತಿ ಹೆಸರು ಮೇಯರ್ ಅಭ್ಯರ್ಥಿಯಾಗಿ ಘೋಷಣೆಯಾಗುವುದು ಬಹುತೇಕ ಖಚಿತ. ಮೂಲಗಳ ಪ್ರಕಾರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯೆಯಾಗಿರುವ ಸೌಮ್ಯ ಶಿವಕುಮಾರ್‌ರನ್ನು ಮೇಯರ್ ಅಭ್ಯರ್ಥಿಯನ್ನಾಗಿಸಬೇಕು ಎಂದು ಜೆಡಿಎಸ್ ಷರತ್ತು ಒಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 269 ಮತದಾರರನ್ನು ಹೊಂದಿರುವ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ 135 ಮತಗಳನ್ನು ಪಡೆಯುವ ಅಭ್ಯರ್ಥಿ ಮೇಯರ್ ಆಗಿ ಆಯ್ಕೆಯಾಗುತ್ತಾರೆ.
ಒಟ್ಟಾರೆ ಕಾಂಗ್ರೆಸ್ 112 ಮತಗಳನ್ನು ಹೊಂದಿದ್ದರೆ ಜೆಡಿಎಸ್‌ನ ಎಲ್ಲ 23 ಸದಸ್ಯರು ಕಾಂಗ್ರೆಸ್ ಪರ ಮತ ಚಲಾಯಿಸಿದರೆ ಮಾತ್ರ ಆ ಪಕ್ಷದ ಅಭ್ಯರ್ಥಿ ಮೇಯರ್ ಆಗುತ್ತಾರೆ. ಕಾಂಗ್ರೆಸ್ ಮೇಯರ್ ಅಭ್ಯರ್ಥಿಗೆ ಜೆಡಿಎಸ್‌ನ ಬಂಡಾಯ ಶಾಸಕರು ಮತ ಹಾಕಬೇಕಾಗುತ್ತದೆ. ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಬಂಡಾಯಗಾರರು ಬಿಜೆಪಿಗೆ ಬೆಂಬಲ ಘೋಷಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 127 ಮತಗಳನ್ನು ಹೊಂದಿರುವ ಬಿಜೆಪಿಗೆ ಕುಮಾರಸ್ವಾಮಿಯೊಂದಿಗೆ ಗುರುತಿಸಿಕೊಂಡಿರುವ ಕೇವಲ 8 ಮಂದಿ ಬೆಂಬಲ ಸೂಚಿಸಿದರೆ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಗಿ ಆಯ್ಕೆಯಾಗುವುದರ ಜೊತೆಗೆ ಎಲ್ಲ ಜೆಡಿಎಸ್ ಸದಸ್ಯರಿಗೂ ಅಧಿಕಾರ ಸಿಕ್ಕಂತಾಗುತ್ತದೆ. ಬಿಜೆಪಿಗೆ ಬೆಂಬಲ ನೀಡಿದರೆ ಉಪ ಮೇಯರ್, 5 ಸ್ಥಾಯಿ ಸಮಿತಿ ಹಾಗೂ ಒಬ್ಬ ಜೆಡಿಎಸ್ ಗುಂಪಿನ ನಾಯಕರಾಗಬಹುದು. ಆದರೆ, ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ತಮ್ಮ ಪಕ್ಷಕ್ಕೆ ದೊರೆಯುವ ಸ್ಥಾಯಿ ಸಮಿತಿ ಅಧ್ಯಕ್ಷಗಾದಿಗೆ ಪೈಪೋಟಿ ಏರ್ಪಡಬಹುದು.
ಒಂದು ವೇಳೆ ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಿಸಿದರೆ ಮೇಯರ್ ರೇಸ್‌ನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ್ ಮಂದಿರ ವಾರ್ಡ್ ಸದಸ್ಯೆ ಲಕ್ಷ್ಮೀ ಉಮೇಶ್, ದೀಪಾಂಜಲಿ ನಗರ ವಾರ್ಡ್‌ನ ಅನುಪಮಾ ಧರ್ಮಪಾಲ್, ಸರ್.ಸಿ.ವಿ.ರಾಮನ್‌ನಗರ ವಾರ್ಡ್‌ನ ಅರುಣಾ ರವಿ ಹೆಸರುಗಳು ಕೇಳಿ ಬಂದಿವೆ. ಅಲ್ಲದೆ, ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ದಕ್ಷಿಣ ಭಾಗಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದರಿಂದ ಈ ಬಾರಿ ಕೇಂದ್ರ ಭಾಗಕ್ಕೆ ಬಿಟ್ಟುಕೊಡಬೇಕು ಎಂಬ ಜೆಡಿಎಸ್ ಷರತ್ತಿಗೆ ಕೊನೆ ಘಳಿಗೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಪಕ್ಷ ಜೈ ಎಂದರೆ ಲಗ್ಗೆರೆ ವಾರ್ಡ್‌ನ ಜೆಡಿಎಸ್ ಸದಸ್ಯೆ ಮಂಜುಳಾನಾರಾಯಣಸ್ವಾಮಿಯವರ ಹೆಸರು ಮೇಯರ್ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದೆ.







