ಬೆಳೆನಷ್ಟಪರಿಹಾರ ನೀಡಲು ಸಿಎಂ ಭರವಸೆ

ಮಂಡ್ಯ:ಕಾವೇರಿ ಚಳವಳಿ ತಾತ್ಕಾಲಿಕ ಸ್ಥಗಿತಮಂಡ್ಯ, ಸೆ.24: ಬೆಳೆನಷ್ಟ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಭರವಸೆ ಹಿನ್ನೆಲೆಯಲ್ಲಿ 19 ದಿನಗಳಿಂದ ನಡೆಯುತ್ತಿದ್ದ ಕಾವೇರಿ ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರ ಜತೆ ಶನಿವಾರ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚಿಸಿದ ನಂತರ, ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಮಾದೇಗೌಡ ಅವರು ಕಾವೇರಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯ ಕೊಳ್ಳದ ರೈತರ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಗಲಭೆಯಲ್ಲಿ ಬಂಧಿತರಾಗಿರು ವವರ ಬಿಡುಗಡೆ ಜತೆಗೆ ಅವರ ಮೇಲಿನ ಕೇಸುಗಳನ್ನು ವಾಪಸ್ ಪಡೆಯುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರು ನೀಡಿರುವ ಭರವಸೆ ಬಗ್ಗೆ ಚರ್ಚಿಸಿ ಸರ್ವಾನುಮತದ ಅಭಿಪ್ರಾಯದಂತೆ ಚಳವಳಿಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಿದ್ದೇವೆ. ಸರಕಾರ ಕೈಗೊಂಡ ಮಹತ್ವದ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇವೆ ಎಂದವರು ಹೇಳಿದರು.
ಸುಪ್ರೀಂಕೋರ್ಟ್‌ನ ಅವೈಜ್ಞಾನಿಕ ಆದೇಶ ಹಾಗೂ ರಾಜ್ಯ ಸರಕಾರದ ಅವಿವೇಕದ ನಡೆಯ ವಿರುದ್ಧ ಚಳವಳಿಯಲ್ಲಿ ಪಾಲ್ಗೊಂಡ ಎಲ್ಲಾ ವರ್ಗದ ಜನರು, ಸಂಘಟನೆಗಳ ಮುಖಂಡರು, ಸ್ವಾಮೀಜಿಗಳು, ಸಾಹಿತಿಗಳಿಗೆ ಮಾದೇಗೌಡ ಕೃತಜ್ಞತೆ ಹೇಳಿದರು.
ಚಳವಳಿಯ 19ನೆ ದಿನವಾದ ಚಿತ್ರದುರ್ಗ ಮುರುಘಾಮಠದ ಡಾ.ಮುರುಘಾ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಭಗೀರಥ ಮಠ, ಮಡಿವಾಳ ಪೀಠ, ವಾಲ್ಮೀಕಿ ಮರಳೇಗುಡ್ಡ ಮಠ, ಬೇಬಿ ಮಠ, ಆದಿಚುಂಚನಗಿರಿ ಶಾಖಾ ಮಠ, ರೈತಸಂಘ, ಮಹಿಳಾ, ಮತ್ತಿತರ ಸಂಘಟನೆಗಳ ಜನರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಪ್ರವೇಶಿಸಿ ಸರಿಪಡಿಸ ಬೇಕಾದ ಪ್ರಧಾನಿ ನರೇಂದ್ರ ಮೋದಿಯವರು ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದರು.
ಅಮಾನವೀಯ ಬೇಡಿಕೆ: ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಮುರುಘಾಶ್ರೀ ಅವರು, ಮಾನವೀಯ ಬೇಡಿಕೆಗೆ ಬೆಲೆ ಕೊಡಬೇಕು ನಿಜ. ಆದರೆ, ನಮ್ಮಲ್ಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಇರುವಾಗ ಬೆಳೆಗೆ ತಮಿಳುನಾಡು ನೀರು ಕೇಳುತ್ತಿರುವುದು ಅಮಾನವೀಯ ಬೇಡಿಕೆಯಾಗಿದೆ ಎಂದು ವಿಷಾದಿಸಿದರು.
ರಾಜ್ಯ ವಿಧಾನಮಂಡಲ ಅಧಿವೇಶನ ಸಮಯೋಚಿತ ತೀರ್ಮಾನ ಕೈಗೊಂಡಿದ್ದು, ಇದನ್ನು ಎಲ್ಲರೂ ಬೆಂಬಲಿಸಬೇಕು. ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬೆಳೆವಿಮೆ ಯೋಜನೆಯಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕನಕಪುರ ಮರಳೇಗುಡ್ಡ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಒಕ್ಕೂಟ ವ್ಯವಸ್ಥೆಯ ರಕ್ಷಣೆ ಪ್ರಧಾನಿ ಅವರ ಜವಾಬ್ದಾರಿಯಾಗಿದ್ದು, ಜನರ ತಾಳ್ಮೆ ಪರೀಕ್ಷಿಸಲು ಮುಂದಾಗದೆ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ರೈತಸಂಘದ (ಪ್ರತ್ಯೇಕ ಬಣ) ಕಾರ್ಯಕರ್ತರು, ಬೆಳೆಗಳಿಗೆ ನೀರು ಹರಿಸದೇ ಇರುವುದರಿಂದ ಎಕರೆಗೆ ಕನಿಷ್ಠ 50 ಸಾವಿರ ರೂ. ಬೆಳೆನಷ್ಟ ಪರಿಹಾರ ನೀಡಬೇಕು, ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಈ ವರ್ಷ ಬೆಳೆ ಕೈಸೇರುವುದಿಲ್ಲವಾದ್ದರಿಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳೂ ಸೇರಿದಂತೆ ರೈತರ ಎಲ್ಲಾ ಸಾಲಮನ್ನಾ ಮಾಡಬೇಕು. ಬೆಳೆನಷ್ಟ ಪರಿಹಾರ ಘೋಷಿಸಬೇಕು ಎಂದು ತಾಲೂಕು ಸ್ತ್ರೀಸ್ವಹಾಯ ಸಂಘಗಳ ಒಕ್ಕೂಟದ ಮಹಿಳೆಯರು ತಾಕೀತು ಮಾಡಿದರು.
ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಜಿ.ಬಿ.ಶಿವಕುಮಾರ್, ಎಂ.ಎಸ್.ಆತ್ಮಾನಂದ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ರೈತ ನಾಯಕಿ ಸುನಂದಾ ಜಯರಾಂ, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಇತರ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.







