ತ್ರಿವಳಿ ತಲಾಖ್ ಪದ್ಧತಿ ಶರಿಯಾಕ್ಕೆ ಅನುಗುಣವಾಗಿಲ್ಲ: ಸರಕಾರ
ಹೊಸದಿಲ್ಲಿ, ಸೆ.24: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಸೇರಿದಂತೆ ಸುಮಾರು 20 ಇಸ್ಲಾಮಿಕ್ ರಾಷ್ಟ್ರಗಳು ವೈವಾಹಿಕ ಕಾನೂನುಗಳನ್ನು ನಿಯಂತ್ರಿಸುತ್ತಿರುವುದರಿಂದ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನವನ್ನು ನೀಡುವ ಪದ್ಧತಿಯು ಶರಿಯಾಕ್ಕೆ ಅನುಗುಣವಾಗಿದೆ ಎಂಬ ಪ್ರತಿಪಾದನೆಯು ತಪ್ಪು ಗ್ರಹಿಕೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಲು ನರೇಂದ್ರ ಮೋದಿ ಸರಕಾರವು ನಿರ್ಧರಿಸಿದೆ.
ಏಕರೂಪ ನಾಗರಿಕ ಸಂಹಿತೆಯ ಯಾವುದೇ ಉಲ್ಲೇಖವನ್ನು ಮಾಡುವ ಗೋಜಿಗೆ ಹೋಗದ ಕೇಂದ್ರವು,ತ್ರಿವಳಿ ತಲಾಖ್ ಹೇಳುವ ಮೂಲಕ ವಿಚ್ಛೇದನವು ಶರಿಯಾದ ಅನುಮತಿಯನ್ನು ಹೊಂದಿದೆ ಎಂಬ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಅಹವಾಲು ತಪ್ಪು ಮತ್ತು ಈ ಪದ್ಧತಿಯು ಭಾರತದಂತಹ ಜಾತ್ಯತೀತ ದೇಶದಲ್ಲಿ ಸಂವಿಧಾನವು ಖಚಿತಪಡಿಸಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣವೊಂದರಲ್ಲಿ ವಾದಿಸಲು ಸಜ್ಜಾಗಿದೆ ಎಂದು ಉನ್ನತ ಸರಕಾರಿ ಮೂಲಗಳು ತಿಳಿಸಿವೆ.
ಏಕರೂಪ ನಾಗರಿಕ ಸಂಹಿತೆಯ ಯಾವುದೇ ಉಲ್ಲೇಖವನ್ನು ಮಾಡದಿರುವ ಮೂಲಕ ತಾನು ಅಲ್ಪಸಂಖ್ಯಾತರ ಮೇಲೆ ವೈಯಕ್ತಿಕ ಕಾನೂನುಗಳನ್ನು ಹೇರುತ್ತಿದ್ದೇನೆ ಎಂಬ ಯಾವುದೇ ಆರೋಪವನ್ನು ವಿರೋಧಿಸಲು ಸಾಧ್ಯ ಎನ್ನುವುದು ಸರಕಾರದ ಆಶಯ ವಾಗಿದೆ.
ಸರಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಕಾನೂನು ಆಯೋಗದ ಪರಿಶೀಲನೆಗೆ ಒಪ್ಪಿಸಿದ್ದು, ಅದು ವಿವಿಧ ವೈಯಕ್ತಿಕ ಕಾನೂನು ಮಂಡಳಿಗಳು ಮತ್ತು ಇತರ ಪಾಲುದಾರರರೊಂದಿಗೆ ಚರ್ಚೆಗಳು ಸೇರಿದಂತೆ ವ್ಯಾಪಕ ಸಮಾಲೋಚನೆಗಳನ್ನು ಕೈಗೊಳ್ಳಲಿದೆ.





