ವಿಶ್ವ ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ ಭಾರತದ ಎಷ್ಟು ವಿದ್ಯಾಸಂಸ್ಥೆಗಳಿವೆ ನೋಡಿ
ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ

ಹೊಸದಿಲ್ಲಿ, ಸೆ.25: ಜಾಗತಿಕ ಉನ್ನತ ಶಿಕ್ಷಣ ರಂಗದಲ್ಲಿ ಭಾರತ ತನ್ನ ಸ್ಥಾನವನ್ನು ಸ್ವಲ್ಪಮಟ್ಟಿಗೆ ಉತ್ತಮಪಡಿಸಿಕೊಂಡಿದ್ದು, ವಿಶ್ವದ 400 ಅಗ್ರ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ 31 ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆದಿವೆ. ಪಟ್ಟಿಯಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಗ್ರಸ್ಥಾನಿಯಾಗಿದೆ.
ಟೈಮ್ಸ್ ಹೈಯರ್ ಎಜ್ಯುಕೇಶನ್ (ಟಿಎಚ್‌ಇ) ಬಿಡುಗಡೆ ಮಾಡಿದ ವಿಶ್ವ ವಿಶ್ವವಿದ್ಯಾನಿಲಯಗಳ ಪಟ್ಟಿ-2016-17ರಲ್ಲಿ ಬೆಂಗಳೂರಿನ ಐಐಎಸ್‌ಸಿ ಭಾರತದ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿದೆ. ಭಾರತೀಯ ವಿಜ್ಞಾನ ಸಂಸ್ಥೆ ಕಳೆದ ವರ್ಷದ ಪಟ್ಟಿಗಿಂತ 50 ಸ್ಥಾನ ಮೇಲೇರಿದೆ.
ಕಳೆದ ವರ್ಷ 250-300ನೆ ಸ್ಥಾನದ ಪಟ್ಟಿಯಲ್ಲಿದ್ದ ಭಾರತ ಈ ಬಾರಿ 201-250ನೆ ಸ್ಥಾನಕ್ಕೆ ನೆಗೆದಿದೆ. ಅಂತೆಯೇ ಕಳೆದ ವರ್ಷ 351-400ನೆ ಸ್ಥಾನದಲ್ಲಿದ್ದ ಮುಂಬೈ ಐಐಟಿ ಕೂಡಾ ಐಐಎಸ್‌ಸಿ ವರ್ಗಕ್ಕೆ ಭಡ್ತಿ ಪಡೆದಿದೆ.
ಆದರೆ ಅಗ್ರ 200ರ ಪಟ್ಟಿಯಲ್ಲಿ ಭಾರತದ ಯಾವ ವಿವಿಯೂ ಸ್ಥಾನ ಪಡೆದಿಲ್ಲ. ಐಐಟಿ ರೂರ್ಕೆಲಾ, ವೆಂಕಟೇಶ್ವರ ವಿವಿ ತೇಜಪುರ ವಿವಿ ಹಾಗೂ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಕೂಡಾ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅಗ್ರ 10 ರ ಪಟ್ಟಿಯಲ್ಲಿ ಬ್ರಿಟನ್ ಹಾಗೂ ಅಮೆರಿಕದ ವಿವಿಗಳು ಪ್ರಾಬಲ್ಯ ಹೊಂದಿವೆ. ಆಕ್ಸ್‌ಫರ್ಡ್ ವಿ.ವಿ., ಕೇಂಬ್ರಿಡ್ಜ್ ವಿ.ವಿ. ಹಾಗೂ ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಹೊರತುಪಡಿಸಿ ಏಳು ಸಂಸ್ಥೆಗಳು ಅಮೆರಿಕದ ವಿ.ವಿ.ಗಳು. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎರಡನೆ ಸ್ಥಾನದಲ್ಲಿದೆ. ಒಂಬತ್ತನೆ ಸ್ಥಾನದಲ್ಲಿ ಸ್ವಿಸ್ ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದೆ. 980 ಸಂಸ್ಥೆಗಳ ಪಟ್ಟಿಯಲ್ಲಿ 24 ಏಷ್ಯನ್ ದೇಶಗಳ 289 ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆದಿವೆ.







