ಪಾಕ್ ಕಲಾವಿದರಿಗೆ ಬೆದರಿಕೆ ಹಾಕಿದ ಎಂಎನ್‌ಎಸ್ ಜಾತಕ ಜಾಲಾಡಿದ ನ್ಯಾ. ಕಾಟ್ಜು

ಹೊಸದಿಲ್ಲಿ, ಸೆ.25: ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಪಾಕಿಸ್ತಾನ ಕಲಾವಿದರಿಗೆ ಬೆದರಿಕೆ ಹಾಕಿದ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಛೀಮಾರಿ ಹಾಕಿದ್ದಾರೆ.
ಕಾಟ್ಜು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಪಾಕಿಸ್ತಾನಿ ಕಲಾವಿದರಿಗೆ ಬೆದರಿಕೆ ಹಾಕಿದವರು ನಾಚಿಕೆಗೇಡಿ, ಅಯೋಗ್ಯರು. ದೇಶಕ್ಕೆ ಅಗೌರವ ತಂದಿದ್ದಾರೆ. ಇದೇ ಅವಿವೇಕಿಗಳು ಮುಂಬೈನಲ್ಲಿ ಬಿಹಾರಿ ಹಾಗೂ ಉತ್ತರ ಪ್ರದೇಶದವರಿಗೆ ಬೆದರಿಕೆ ಹಾಕಿದ್ದರು. ಕೇವಲ ವೋಟ್‌ಬ್ಯಾಂಕ್ ಸೃಷ್ಟಿಸುವ ಸಲುವಾಗಿ ಈ ಹುನ್ನಾರ ಎಸಗಿದ್ದಾರೆ. ದೇಶವನ್ನು ಹೊತ್ತಿ ಉರಿಸುವಂಥದ್ದು" ಎಂದು ಹೇಳಿದ್ದಾರೆ.
ಉರಿ ಘಟನೆ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕಲಾವಿದರಾದ ಫವಾದ್ ಖಾನ್ ಅವರಂಥವರು ತಕ್ಷಣ ದೇಶ ಬಿಡಬೇಕು ಎಂದು ಎಂಎನ್‌ಎಸ್ ಶುಕ್ರವಾರ ಆಗ್ರಹಿಸಿದ್ದರು. ಇಲ್ಲದಿದ್ದರೆ ಅವರ ಶೂಟಿಂಗ್‌ಗೆ ತಡೆ ಒಡ್ಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ಮಹಿರಾ ಖಾನ್ ಹಾಗೂ ಫವಾದ್ ಖಾನ್ ಅಂಥ ಕಲಾವಿದರು ಭಾರತೀಯ ಕಲಾವಿದರ ಅವಕಾಶಗಳನ್ನು ಅಪಹರಿಸುತ್ತಿದ್ದಾರೆ ಎಂದು ರಾಜ್ ಠಾಕ್ರೆ ಪತ್ನಿ ಶಾಲಿನಿ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು. ಇವರನ್ನು ದೇಶ ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದರು. ಫವಾದ್ ಮತ್ತು ಮಹಿರಾ ನಟಿಸಿರುವ ಕರಣ್ ಜೋಹರ್ ಅವರ ಏ ದಿಲ್ ಹೈ ಮುಷ್ಕಿಲ್ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.







