ಪತ್ನಿಯನ್ನು ಕಡಿದು ಕೊಲೆಗೈದ ಮಾನಸಿಕ ಅಸ್ವಸ್ಥ ಪತಿ

ಅಂಕಮಾಲಿ, ಸೆಪ್ಟಂಬರ್ 25: ಮನೋರೋಗಿಯಾದ ಪತಿಯೊಬ್ಬ ತನ್ನ ಪತ್ನಿಯನ್ನೇ ಕಡಿದು ಕೊಲೆಗೈದ ಘಟನೆ ನೆಡುಂಬಶ್ಶೇರಿ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ನೆಡುಂಬಶ್ಶೇರಿ ಗ್ರಂಥಾಲಯದ ಸಮೀಪದಲ್ಲಿ ಸುಭದ್ರಾ ಎಂಬ ಅರುವತ್ತಾರು ವರ್ಷದ ಮಹಿಳೆಯನ್ನು ಮನೆಯಲ್ಲಿ ಬೇರೆಯಾರೂ ಇಲ್ಲದ ವೇಳೆ ಮಾನಸಿಕ ಅಸ್ವಸ್ಥನಾದ ಜಿ.ವಾಸು(68) ಎಂಬಾತ ಕಡಿದು ಕೊಲೆಗೈದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಸುಮಾರು ಹತ್ತುಗಂಟೆಯ ವೇಳೆಗೆ ಘಟನೆ ನಡೆದಿದ್ದು, ಘಟನೆ ನಡೆಯುವಾಗ ಮನೆಯಲ್ಲಿ ಪತಿ,ಪತ್ನಿ ಇಬ್ಬರು ಮಾತ್ರ ಇದ್ದರು. ಟಿವಿ ನೋಡುತ್ತಾ ಕುಳಿತಿದ್ದ ಸುಭದ್ರಾರನ್ನು ಹಿಂಬದಿಯಿಂದ ಬಂದ ಪತಿ ಮಚ್ಚಿನಿಂದ ಕಡಿದಿದ್ದಾನೆ. ಹೊಟ್ಟೆಯ ಎಡಭಾಗಕ್ಕೆ ತೀವ್ರ ಗಾಯವಾದ ಸುಭದ್ರಾರ ಆಕ್ರಂದನ ಕೇಳಿ ಹತ್ತಿರದ ಮನೆಯಲ್ಲಿಯೇ ವಾಸವಿದ್ದ ದಂಪತಿಯ ಹಿರಿಯಮಗ ಮತ್ತು ಆತನ ಪತ್ನಿ ಓಡಿ ಬಂದಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮಹಿಳೆ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಚೆಂಗಮನಾಟ್ ಎಸ್ಸೈ ಕೆ.ಜಿ. ಗೋಪಕುಮಾರ್ ಆರೋಪಿ ವಾಸುವನ್ನು ಬಂಧಿಸಿದ್ದಾರೆ. ವಾಸು ಕೆಎಸ್ಸಾರ್ಟಿಸಿ ನಿವೃತ್ತ ಚಾಲಕನಾಗಿದ್ದು ನಾಲ್ಕುವರ್ಷಗಳ ಹಿಂದೆ ನಿವೃತ್ತನಾಗಿದ್ದ. ಪೈಂಗುಳಂ ಆಸ್ಪತ್ರೆಯಲ್ಲಿ ಮೂರು ತಿಂಗಳಕಾಲ ಮನೋರೋಗಕ್ಕೆ ಆತ ಚಿಕಿತ್ಸೆ ಪಡೆದಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.





